- Kannada News Photo gallery Cricket photos Virat Kohli becomes the Asian captain with most number of wins in SENA countries
Virat Kohli: SENA ದೇಶಗಳ ವಿರುದ್ದದ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ
Team India: 65 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ 38 ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
Updated on: Sep 07, 2021 | 7:37 PM

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ. ಇಂಗ್ಲೆಂಡ್ ತಂಡವನ್ನು ಓವಲ್ ಮೈದಾನದಲ್ಲಿ 157 ರನ್ಗಳಿಂದ ಮಣಿಸುವ ಮೂಲಕ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಕೊಹ್ಲಿ ಇಂಗ್ಲೆಂಡ್ ವಿರುದ್ಧ 10 ಟೆಸ್ಟ್ ಪಂದ್ಯಗಳನ್ನು ಗೆದ್ದ ಏಕೈಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ 4 ಪ್ರಮುಖ ದೇಶಗಳ ವಿರುದ್ಧ ಅತಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 10 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಬೇರೆ ಯಾವ ಭಾರತೀಯ ನಾಯಕನೂ ಕೂಡ ಇಷ್ಟೊಂದು ಗೆಲುವಿನ ಸಮೀಪ ತಲುಪಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ವಿಶೇಷ. ಅಂದರೆ, ಇಂಗ್ಲೆಂಡ್ ವಿರುದ್ದ ಭಾರತದ ಯಾವ ನಾಯಕ ಕೂಡ 5 ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಕೊಹ್ಲಿ ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 10 ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನು 6 ಪಂದ್ಯಗಳನ್ನು ಸೋತಿದ್ದರೆ, 2 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ಮತ್ತೊಂದೆಡೆ, ಟೀಮ್ ಇಂಡಿಯಾದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಎಂಎಸ್ ಧೋನಿ ಇಂಗ್ಲೆಂಡ್ ವಿರುದ್ಧ 15 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದರು. ಆದರೆ ಅವರು ಕೇವಲ 3 ಟೆಸ್ಟ್‌ಗಳನ್ನು ಮಾತ್ರ ಗೆದಿದ್ದಾರೆ. ಅಲ್ಲದೆ 9 ಪಂದ್ಯಗಳಲ್ಲಿ ಸೋಲನುಭವಿಸಿದರೆ 3 ಪಂದ್ಯಗಳು ಡ್ರಾ ಆಗಿವೆ. ಇನ್ನು ಮಾಜಿ ನಾಯಕರುಗಳಾದ ಮೊಹಮ್ಮದ್ ಅಜರುದ್ದೀನ್ ಮತ್ತು ಅಜಿತ್ ವಾಡೇಕರ್ ಅವರು ಇಂಗ್ಲೆಂಡ್ ವಿರುದ್ಧ ತಲಾ 3 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದ್ದರು.

ಇಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಭಾರತದ ನಾಯಕನಾಗಿ 4 ದೇಶಗಳ ವಿರುದ್ಧ ಅತೀ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಗೆದ್ದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ದ 10, ದಕ್ಷಿಣ ಆಫ್ರಿಕಾ ವಿರುದ್ಧ 7 ಟೆಸ್ಟ್ ಗೆದ್ದರೆ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ 6 ಗೆಲುವು ಸಾಧಿಸಿದ್ದಾರೆ. ಹಾಗೆಯೇ SENA ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ 6 ಟೆಸ್ಟ್‌ಗಳನ್ನು ಗೆದ್ದ ಏಕೈಕ ಏಷ್ಯನ್ ನಾಯಕ ಎಂಬ ದಾಖಲೆ ಕೂಡ ಕೊಹ್ಲಿ ಪಾಲಾಗಿದೆ.

65 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ 38 ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇನ್ನು 16 ಟೆಸ್ಟ್‌ಗಳಲ್ಲಿ ಸೋತರೆ 11 ಪಂದ್ಯಗಳು ಡ್ರಾ ಆಗಿವೆ. ಈ ಮೂಲಕ ಟೀಮ್ ಇಂಡಿಯಾ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ.




