ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ವರ್ಷಗಳ ಹಿಂದೆ ಗಬ್ಬರ್ ಸಿಂಗ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅಷ್ಟೇ ಅಲ್ಲದೆ ಆ ಬಳಿಕ ಪತ್ನಿ ಜೊತೆ ಧವನ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇಬ್ಬರು ಡೈವೋರ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನು ಪುಷ್ಠೀಕರಿಸುವಂತೆ ಆಯೇಷಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಿಖರ್ ಧವನ್ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ ಆಯೇಷಾ ಮುಖರ್ಜಿಯನ್ನು ಪ್ರೀತಿಸಿ ಮದುವೆಯಾಗಿದ್ದರು. 2012 ರಲ್ಲಿ ತನಗಿಂತ 10 ವರ್ಷ ಹಿರಿಯಳೊಂದಿಗೆ ಹೊಸ ಜೀವನ ಆರಂಭಿಸಿದ್ದ ಧವನ್ಗೆ ಜೋರಾವರ್ ಎಂಬ ಮಗನಿದ್ದಾನೆ. ಇನ್ನು ಮೊದಲ ಪತಿಯಿಂದ ಡೈವೊರ್ಸ್ ಪಡೆದಿದ್ದ ಆಯೇಷಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಒಂಬತ್ತು ವರ್ಷಗಳ ದಾಂಪತ್ಯ ಜೀವನವು ಸುಗಮವಾಗಿ ಸಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಈ ಜೋಡಿ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಆಯೇಷಾ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ಶಿಖರ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು.
ಇದೀಗ ವಿಚ್ಛೇದನ ಕುರಿತಾಗಿ ಆಯೇಷಾ ಹಾಕಿರುವ ಪೋಸ್ಟ್ಗಳು ಇಬ್ಬರು ಬೇರ್ಪಟ್ಟಿದ್ದಾರೆಯೇ ಎಂಬ ಪ್ರಶ್ನೆಯೊಂದು ಹುಟ್ಟುಹಾಕಿದೆ. ' ನಾನು ಎರಡನೇ ಬಾರಿಗೆ ವಿಚ್ಛೇದನ ಪಡೆಯುವವರೆಗೂ ಡೈವೋರ್ಸ್ ಎಂಬುದು ಒಂದು ಕೊಳಕು ಪದವಾಗಿತ್ತು. ತಮಾಷೆಯೆಂದರೆ ಪದಗಳು ಎಷ್ಟು ಪ್ರಬಲವಾದ ಅರ್ಥಗಳನ್ನು ಹೊಂದಿರುತ್ತವೆ. ನಾನು ಇದನ್ನು ವಿಚ್ಛೇದಿತಳಾಗಿ ಅನುಭವಿಸಿದೆ. ನಾನು ಮೊದಲ ಬಾರಿಗೆ ವಿಚ್ಛೇದನ ಪಡೆದಾಗ ನನಗೆ ತುಂಬಾ ಭಯವಾಯಿತು. ನಾನು ವಿಫಲನಾಗಿದ್ದೇನೆ ಮತ್ತು ಆ ಸಮಯದಲ್ಲಿ ನಾನು ಏನಾದರೂ ತಪ್ಪು ಮಾಡುತ್ತಿದ್ದೇನೆ ಎಂದು ನನಗೆ ಅನಿಸಿತು ಎಂದು ಆಯೇಷಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ನಾನು ಎಲ್ಲರನ್ನು ನಿರಾಸೆಗೊಳಿಸಿದೆ ಮತ್ತು ಸ್ವಾರ್ಥಿ ಎಂದು ಭಾವಿಸಿದೆ. ನಾನು ನನ್ನ ಹೆತ್ತವರನ್ನು ನಿರಾಶೆಗೊಳಿಸುತ್ತಿದ್ದೇನೆ ಎಂದನಿಸಿತು. ನಾನು ನನ್ನ ಮಕ್ಕಳನ್ನು ಅವಮಾನಿಸುತ್ತಿದ್ದೇನೆ. ಸ್ವಲ್ಪ ಮಟ್ಟಿಗೆ ನಾನು ದೇವರನ್ನು ಅವಮಾನಿಸಿದ್ದೇನೆ ಎಂದು ಭಾವಿಸಿದೆ. ನಿಜವಾಗಲೂ ವಿಚ್ಛೇದನ ಎಂಬುದು ತುಂಬಾ ಕೆಟ್ಟದ್ದು ಪದವಾಗಿತ್ತು. ಈಗಾಗಲೇ ಒಮ್ಮೆ ವಿಚ್ಛೇದನ ಪಡೆದಿದ್ದರಿಂದ, ಎರಡನೇ ಬಾರಿಗೆ ನಾನು ಹೆಚ್ಚು ಅಪಾಯದಲ್ಲಿದ್ದೇನೆ ಅಂದುಕೊಂಡಿದ್ದೆ. ಹಾಗಾಗಿ ನನ್ನ ಎರಡನೇ ಮದುವೆ ಮುರಿದುಬಿದ್ದಾಗ ನಿಜವಾಗಿಯೂ ಭಯವಾಯಿತು ಎಂದು ಆಯೇಷಾ ಮುಖರ್ಜಿ ಬರೆದುಕೊಂಡಿದ್ದಾರೆ.
ಇಲ್ಲಿ ಎರಡು ಬಾರಿ ಡೈವೋರ್ಸ್ ಪಡೆದಿದ್ದೇನೆ ಎಂದು ಆಯೇಷಾ ಉಲ್ಲೇಖಿಸಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಶಿಖರ್ ಧವನ್ ಅವರಿಂದ ವಿಚ್ಛೇದನ ಪಡೆದ ಬಳಿಕ ಈ ಪೋಸ್ಟ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದಾಗ್ಯೂ ತಮ್ಮ ಡೈವೊರ್ಸ್ ಬಗ್ಗೆ ಶಿಖರ್ ಧವನ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗೆಯೇ ಆಯೇಷಾ ಅವರ ಹೇಳಿಕೆಯನ್ನೂ ಸಹ ನಿರಾಕರಿಸಿಲ್ಲ. ಹೀಗಾಗಿ ಕಳೆದೊಂದು ವರ್ಷದಿಂದ ದೂರವಾಗಿದ್ದ ಧವನ್ ಜೋಡಿ ಇದೀಗ ಡೈವೋರ್ಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
Published On - 10:04 pm, Tue, 7 September 21