ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ ಯಾರು ಬೆಸ್ಟ್? ಜಾಣ್ಮೆಯ ಉತ್ತರ ನೀಡಿದ ಶಮಿ
Mohammed Shami: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು, ಇದಕ್ಕೆ ಮುಖ್ಯ ಕಾರಣ ಪಾದದ ನೋವಿನ ಸಮಸ್ಯೆ. ಏಕದಿನ ವಿಶ್ವಕಪ್ ಪಂದ್ಯಗಳ ವೇಳೆ ಮೊಹಮ್ಮದ್ ಶಮಿ ಪಾದದ ನೋವಿಗೆ ತುತ್ತಾಗಿದ್ದರು. ಇದಾಗ್ಯೂ ಅವರು ಸಂಪೂರ್ಣ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.
Updated on:Feb 08, 2024 | 8:00 AM

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...ಇವರಿಬ್ಬರಲ್ಲಿ ಯಾರು ಬೆಸ್ಟ್? ಈ ಪ್ರಶ್ನೆ ಆಗಿಂದಾಗ್ಗೆ ಕೇಳಿ ಬರುತ್ತಿರುತ್ತದೆ. ಈ ಪ್ರಶ್ನೆಗೆ ಕೆಲವರು ಕಿಂಗ್ ಕೊಹ್ಲಿ ಎಂದರೆ ಮತ್ತೆ ಕೆಲವರು ಹಿಟ್ಮ್ಯಾನ್ ಎಂದು ಉತ್ತರಿಸಿದ್ದಾರೆ. ಆದರೆ ಇದೇ ಪ್ರಶ್ನೆಯನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿಯ ಮುಂದಿಟ್ಟಾಗ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಮೊಹಮ್ಮದ್ ಶಮಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇವರಿಬ್ಬರಲ್ಲಿ ಯಾರು ಅತ್ಯುತ್ತಮ ಬ್ಯಾಟ್ಸ್ಮನ್ ಎಂಬ ಪ್ರಶ್ನೆ ಕೇಳಲಾಗಿತ್ತು. ಇಬ್ಬರನ್ನೂ ಹತ್ತಿರದಿಂದ ನೋಡಿದ್ದ ಶಮಿಗೆ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿಯೇ ಶಮಿ ಜಾಣ್ಮೆಯ ಉತ್ತರ ನೀಡುವ ಮೂಲಕ ಇಬ್ಬರನ್ನು ಗುಣಗಾನ ಮಾಡಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ಶಮಿ, ವಿರಾಟ್ ಕೊಹ್ಲಿ ವಿಶ್ವದಲ್ಲಿಯೇ ಅತ್ಯತ್ತಮ ಬ್ಯಾಟರ್. ಈಗಾಗಲೇ ಅವರು ಸಾಕಷ್ಟು ದಾಖಲೆಗಳನ್ನು ಮುರಿದಿದ್ದಾರೆ. ಹೀಗಾಗಿಯೇ ನಾನು ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎನ್ನಬಲ್ಲೆ ಎಂದು ಶಮಿ ಉತ್ತರ ನೀಡಿದ್ದಾರೆ.

ಅದೇ ರೀತಿ ರೋಹಿತ್ ಶರ್ಮಾ ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್. ಹೀಗಾಗಿ ನನ್ನ ಪ್ರಕಾರ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟರ್ ಆಗಿದ್ದರೆ, ರೋಹಿತ್ ಶರ್ಮಾ ವಿಶ್ವದ ಡೇಂಜರಸ್ ಬ್ಯಾಟ್ಸ್ಮನ್ ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ.

ಈ ಬುದ್ದಿವಂತಿಕೆಯ ಉತ್ತರದ ಮೂಲಕ ಇದೀಗ ಮೊಹಮ್ಮದ್ ಶಮಿ ಕಿಂಗ್ ಕೊಹ್ಲಿ - ಹಿಟ್ಮ್ಯಾನ್ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂಬ ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ. ಇದೀಗ ಶಮಿಯ ಜಾಣ್ಮೆಯ ಉತ್ತರಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಶಮಿ ಅವರ ಪಾದಕ್ಕೆ ಗಾಯವಾಗಿತ್ತು. ಇದಾಗ್ಯೂ ಅವರು ನೋವು ನಿವಾರಕ ಮಾತ್ರೆಗಳೊಂದಿಗೆ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪಾದದ ನೋವಿನ ಸಮಸ್ಯೆಯು ಗಂಭೀರವಾಗಿರುವ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಕಾರಣದಿಂದಾಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಮೂರನೇ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ಶಮಿಯ ಕಂಬ್ಯಾಕ್ಗಾಗಿ ಮತ್ತೊಂದಷ್ಟು ದಿನಗಳವರೆಗೆ ಕಾಯಬೇಕಾಗಿ ಬರಬಹುದು.
Published On - 7:54 am, Thu, 8 February 24
