ದಿಗ್ಗಜರ ನಿವೃತ್ತಿಯೊಂದಿಗೆ ಸತತ ಸೋಲುಗಳಿಂದ ಕಂಗೆಟ್ಟ ವೆಸ್ಟ್ ಇಂಡೀಸ್
West Indies T20 Team: ವೆಸ್ಟ್ ಇಂಡೀಸ್ ಟಿ20 ತಂಡ ಎಂದರೆ ಥಟ್ಟನೆ ಕಣ್ಮುಂದೆ ಬರುವ ಚಿತ್ರವೆಂದರೆ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೊ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್. ಈ ಲೆಜೆಂಡ್ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದಂತೆ ವೆಸ್ಟ್ ಇಂಡೀಸ್ ತಂಡವು ತನ್ನ ಹಳೆಯ ಖದರ್ ಕಳೆದುಕೊಂಡಿದೆ. ಇದಕ್ಕೆ ಸಾಕ್ಷಿ ಪ್ರಸ್ತುತ ತಂಡದ ಪ್ರದರ್ಶನ.
Updated on: Jul 28, 2025 | 12:10 PM

ಲೆಜೆಂಡ್ಸ್ ಆಟಗಾರರ ನಿವೃತ್ತಿಯೊಂದಿಗೆ ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ತಂಡದ ಯುಗಾಂತ್ಯವಾಯಿತಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ವಿಂಡೀಸ್ ಪಡೆಯ ಪ್ರಸ್ತುತ ಪ್ರದರ್ಶನ. 2012, 2014ರಲ್ಲಿ ಟಿ20 ವಿಶ್ವ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡ ಟಿ20 ಕ್ರಿಕೆಟ್ನಲ್ಲಿ ತನ್ನ ಖದರ್ ಕಳೆದುಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಕಳೆದ ಕೆಲವು ವರ್ಷಗಳಿಮದ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದರೂ ವಿಂಡೀಸ್ ಪಡೆ ಟಿ20 ಕ್ರಿಕೆಟ್ನಲ್ಲಿ ಪಾರುಪತ್ಯ ಮೆರೆಯುತ್ತಿದ್ದರು. ಆದರೀಗ ಪ್ರಮುಖ ಆಟಗಾರರ ನಿವೃತ್ತಿಯೊಂದಿಗೆ ವೆಸ್ಟ್ ಇಂಡೀಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳ ಸಂಖ್ಯೆ ಇದೀಗ 16 ಕ್ಕೇರಿದೆ.

ಅಂದರೆ ಕಳೆದ 18 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡ ಗೆದ್ದಿರುವುದು ಕೇವಲ 2 ಮ್ಯಾಚ್ಗಳನ್ನು ಮಾತ್ರ ಎಂದರೆ ನಂಬಲೇಬೇಕು. ಹೀಗೆ ಗೆದ್ದಿರುವುದು ಶ್ರೀಲಂಕಾ ಮತ್ತು ಐರ್ಲೆಂಡ್ ವಿರುದ್ಧ ಮಾತ್ರ. ಇದರ ನಡುವೆ ಬಾಂಗ್ಲಾದೇಶ್, ಶ್ರೀಲಂಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗಳನ್ನು ಸೋತಿದೆ. ಇನ್ನು ಈ ವರ್ಷ ವಿಂಡೀಸ್ ಪಡೆ ಟಿ20 ಸರಣಿ ಗೆದ್ದಿರುವುದು ಐರ್ಲೆಂಡ್ ವಿರುದ್ಧ ಮಾತ್ರ ಎಂದರೆ ನಂಬಲೇಬೇಕು.

ಅದರಲ್ಲೂ ಬಾಂಗ್ಲಾದೇಶ್, ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗಳಲ್ಲಿ ವೈಟ್ ವಾಶ್ ಸೋಲನುಭವಿಸಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ನಾಲ್ಕು ಪಂದ್ಯಗಳಲ್ಲೂ ವೆಸ್ಟ್ ಇಂಡೀಸ್ ತಂಡ ಪರಾಜಯಗೊಂಡಿದೆ. ಅದು ಸಹ ತವರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇತ್ತ ಎಲ್ಲಾ ತಂಡಗಳು ಮುಂಬರುವ ಟಿ20 ವಿಶ್ವಕಪ್ಗಾಗಿ ಭರ್ಜರಿ ತಯಾರಿಗಳನ್ನು ಆರಂಭಿಸುತ್ತಿದ್ದರೆ, ಅತ್ತ ವೆಸ್ಟ್ ಇಂಡೀಸ್ ತಂಡ ಮಾತ್ರ ಸತತ ಸೋಲುಗಳ ಸರಪಳಿಯಿಂದ ಹೊರಬರಲು ಪರದಾಡುತ್ತಿದೆ. ಈ ಪರದಾಟ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಮುಂದುವರೆದಿದೆ. ಹೀಗಾಗಿಯೇ ಟಿ20 ಕ್ರಿಕೆಟ್ನಲ್ಲಿ ಕೆರಿಬಿಯನ್ ದೈತ್ಯರ ಯುಗಾಂತ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
