ಟೀಮ್ ಇಂಡಿಯಾ ಪರ ಆಡಲು ವೈಭವ್ ಸೂರ್ಯವಂಶಿ ಅನರ್ಹ..!
Vaibhav Suryavanshi: ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ನಡೆದ ಯೂತ್ ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ 355 ರನ್ ಕಲೆಹಾಕುವ ಮೂಲಕ ಯೂತ್ ಒಡಿಐ ಸರಣಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್ನಲ್ಲಿ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ಈ ಭರ್ಜರಿ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲು ವೈಭವ್ ಇನ್ನೂ ಒಂದು ವರ್ಷ ಕಾಯಲೇಬೇಕು.
Updated on: Jul 10, 2025 | 8:54 AM

ಭಾರತೀಯ ಕ್ರಿಕೆಟ್ ಅಂಗಳದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ಏಷ್ಯಾಕಪ್ಗೆ ಆಯ್ಕೆ ಮಾಡಬೇಕೆಂಬ ಕೂಗುಗಳು ಕೇಳಿ ಬರುತ್ತಿದೆ. ಅದರಲ್ಲೂ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು ನಾನು ಆಯ್ಕೆಗಾರನಾಗಿದ್ದರೆ, ವೈಭವ್ ಸೂರ್ಯವಂಶಿ ಆಯ್ಕೆಗೆ ಆದ್ಯತೆ ನೀಡುತ್ತಿದ್ದೆ ಎಂಬ ಹೇಳಿಕೆ ನೀಡಿದ್ದಾರೆ.

ಆದರೆ ಈ ಹೇಳಿಕೆಗಳ ಹೊರತಾಗಿಯೂ ವೈಭವ್ ಸೂರ್ಯವಂಶಿ ಅವರನ್ನು ಟೀಮ್ ಇಂಡಿಯಾಗೆ ನೇರವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂಬುದೇ ಸತ್ಯ. ಏಕೆಂದರೆ ವೈಭವ್ ಭಾರತ ಸೀನಿಯರ್ ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ಇನ್ನೂ ಒಂದು ವರ್ಷ ಕಾಯಲೇಬೇಕು. ಇದಕ್ಕೆ ಮುಖ್ಯ ಕಾರಣ ಐಸಿಸಿಯ ಹೊಸ ನಿಯಮ. ವೈಭವ್ ಸೂರ್ಯವಂಶಿಗೆ ಈಗ 14 ವರ್ಷ. ಐಸಿಸಿ ನಿಯಮದ ಪ್ರಕಾರ ರಾಷ್ಟ್ರೀಯ ತಂಡದ ಪರ ಆಡುವ ಆಟಗಾರನಿಗೆ ಕನಿಷ್ಠ 15 ವರ್ಷ ತುಂಬಿರಬೇಕು.

2020 ರಲ್ಲಿ, ಐಸಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕನಿಷ್ಠ ವಯಸ್ಸಿನ ನಿಯಮವನ್ನು ರೂಪಿಸಿದೆ. ಈ ನಿಯಮದ ಪ್ರಕಾರವಷ್ಟೇ ರಾಷ್ಟ್ರೀಯ ಆಟಗಾರರ ಆಯ್ಕೆ ನಡೆಯುತ್ತದೆ. ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ವಯಸ್ಸು 14 ವರ್ಷ. ಅಂದರೆ ಮುಂದಿನ ವರ್ಷ ಮಾರ್ಚ್ 27 ರಂದು ಅವರಿಗೆ 15 ವರ್ಷ ತುಂಬಲಿದೆ. ಅ ಬಳಿಕವಷ್ಟೇ ಅವರು ರಾಷ್ಟ್ರೀಯ ತಂಡದ ಆಯ್ಕೆಗೆ ಅರ್ಹರಾಗಲಿದ್ದಾರೆ.

ಈ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಕನಿಷ್ಠ ವಯೋಮಿತಿ ಇರಲಿಲ್ಲ. ಇದರಿಂದಾಗಿ ಪಾಕಿಸ್ತಾನದ ಹಸನ್ ರಾಜಾ ಕೇವಲ 14 ವರ್ಷ ಮತ್ತು 227 ದಿನಗಳಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ವೈಭವ್ ಸೂರ್ಯವಂಶಿ ಈ ವಿಶ್ವ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎನ್ನಬಹುದು.

ಹೀಗಾಗಿ ಈ ಬಾರಿ ನಡೆಯಲಿರುವ ಏಷ್ಯಾಕಪ್ಗೆ ಹಾಗೂ ಮುಂದಿನ ವರ್ಷ ಜರುಗಲಿರುವ ಟಿ20 ವಿಶ್ವಕಪ್ಗೂ ವೈಭವ್ ಸೂರ್ಯವಂಶಿಯನ್ನು ಪರಿಗಣಿಸುವುದಿಲ್ಲ ಎಂಬುದು ಸ್ಪಷ್ಟ. ಇದಾಗ್ಯೂ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ವಿಶೇಷ ಮನವಿ ಸಲ್ಲಿಸಿದರೆ, ಯುವ ಆಟಗಾರನನ್ನು ಐಸಿಸಿ ಪರೀಕ್ಷೆಗೆ ಒಳಪಡಿಸಲಿದೆ. ಈ ವೇಳೆ ಆಟದ ಅನುಭವ, ಮಾನಸಿಕ ಬೆಳವಣಿಗೆ ಮತ್ತು ಆರೋಗ್ಯವನ್ನು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಐಸಿಸಿ ಅನುಮತಿ ನೀಡಬಹುದು.

ಆದರೆ ಪ್ರಸ್ತುತ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ದಂಡೇ ಕಾದು ನಿಂತಿದೆ. ಹೀಗಾಗಿ ಬಿಸಿಸಿಐ ಇಂತಹದೊಂದು ಮನವಿ ಸಲ್ಲಿಸುವ ಸಾಧ್ಯತೆಯಿಲ್ಲ. ಇದರಿಂದಾಗಿ ವೈಭವ್ ಸೂರ್ಯವಂಶಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಕನಿಷ್ಠ ಒಂದು ವರ್ಷವಾದರೂ ಕಾಯಲೇಬೇಕು. ಹೀಗಾಗಿ ಮುಂಬರುವ ಏಷ್ಯಾಕಪ್ನಲ್ಲಿ ವೈಭವ್ ಸೂರ್ಯವಂಶಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ.




