- Kannada News Photo gallery Cricket photos Will Malajczuk smashed fastest century in Under-19 World Cup history
ಅಬ್ಬರ ಸಿಡಿಲಬ್ಬರ… ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಆಸ್ಟ್ರೇಲಿಯಾ ದಾಂಡಿಗ
Will Malajczuk Century Record: ಆಸ್ಟ್ರೇಲಿಯಾ ಕಿರಿಯರ ತಂಡದ ಆರಂಭಿಕ ಬ್ಯಾಟರ್ ವಿಲ್ ಮಲಾಚೆಕ್ ವಿಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ ಅಂಡರ್-19 ವಿಶ್ವಕಪ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಈ ಶತಕದೊಂದಿಗೆ ಪಾಕಿಸ್ತಾನ್ ಬ್ಯಾಟರ್ನ ಹೆಸರಿನಲ್ಲಿದ್ದ ಭರ್ಜರಿ ಶತಕದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
Updated on:Jan 21, 2026 | 2:29 PM

ಅಂಡರ್-19 ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಆಸ್ಟ್ರೇಲಿಯಾದ ಯುವ ದಾಂಡಿಗ ವಿಲ್ ಮಲಾಚೆಕ್ (Will Malajczuk). ಅದು ಕೂಡ ಸಿಡಿಲಬ್ಬರದ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

ನಮೀಬಿಯಾದ ವಿಂಡ್ಹೋಕ್ನಲ್ಲಿರುವ ಎಸಿಜಿ ಮೈದಾನದಲ್ಲಿ ನಡೆದ ಅಂಡರ್-19 ವಿಶ್ವಕಪ್ನ 16ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಪಾನ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಎಡಗೈ ದಾಂಡಿಗ ವಿಲ್ ಮಲಾಚೆಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಆರ್ಭಟ ಶುರು ಮಾಡಿದ್ದ ವಿಲ್ ಶತಕ ಪೂರೈಸಿದ್ದು ಕೇವಲ 51 ಎಸೆತಗಳಲ್ಲಿ. ಈ ಮೂಲಕ ಅಂಡರ್-19 ವಿಶ್ವಕಪ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.

ಈ ಮೊದಲು ಈ ವಿಶ್ವ ದಾಖಲೆ ಪಾಕಿಸ್ತಾನದ ಖಾಸಿಂ ಅಖ್ತರ್ ಹೆಸರಿನಲ್ಲಿತ್ತು. 2022 ರ ಅಂಡರ್-19 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ ಖಾಸಿಂ ಅಖ್ತರ್ ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಮೂಲಕ ಕಿರಿಯ ವಿಶ್ವಕಪ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ವಿಶ್ವ ದಾಖಲೆಯನ್ನು ವಿಲ್ ಮಲಾಚೆಕ್ ಉಡೀಸ್ ಮಾಡಿದ್ದಾರೆ. ಜಪಾನ್ ವಿರುದ್ಧ ಕೇವಲ 51 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ ವಿಲ್ 102 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡವು 29.1 ಓವರ್ಗಳಲ್ಲಿ 204 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Published On - 2:29 pm, Wed, 21 January 26
