Updated on: Jun 08, 2023 | 4:07 PM
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಮೊದಲ ದಿನದ ಮೊದಲ ಸೆಷನ್ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು ಬಿಟ್ಟರೆ ಉಳಿದಂತೆ ದಿನವಿಡಿ ಆಸೀಸ್ ಬ್ಯಾಟರ್ಗಳದ್ದೇ ಅಬ್ಬರ ಹೆಚ್ಚಾಗಿತ್ತು. ಮೊದಲ ದಿನದಲ್ಲಿ ಶತಕ ಸಿಡಿಸಿದ ಹೆಡ್ ಡಬ್ಲ್ಯುಟಿಸಿ ಫೈನಲ್ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
ಇದೀಗ ಎರಡನೇ ದಿನದಾಟದ ಆರಂಭದಲ್ಲೇ ಶತಕ ಪೂರೈಸಿರುವ ಸ್ಟೀವ್ ಸ್ಮಿತ್ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ 31ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಭಾರತದ ವಿರುದ್ಧ 37 ಇನ್ನಿಂಗ್ಸ್ಗಳಲ್ಲಿ ಸ್ಮಿತ್ 9 ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಭಾರತದ ವಿರುದ್ಧ ಜೋ ರೂಟ್ 45 ಇನ್ನಿಂಗ್ಸ್ಗಳಲ್ಲಿ 9 ಶತಕ, ಗ್ಯಾರಿ ಸೋಬರ್ಸ್ 30 ಇನ್ನಿಂಗ್ಸ್ಗಳಲ್ಲಿ 8, ವಿವ್ ರಿಚರ್ಡ್ಸ್ 41 ಇನ್ನಿಂಗ್ಸ್ಗಳಲ್ಲಿ 8 ಮತ್ತು ರಿಕಿ ಪಾಂಟಿಂಗ್ 51 ಇನ್ನಿಂಗ್ಸ್ಗಳಲ್ಲಿ 8 ಶತಕ ಬಾರಿಸಿದ್ದಾರೆ.
ಸ್ಮಿತ್ ದಾಖಲೆಯ ಶತಕ ಸಿಡಿಸಿದಲ್ಲದೆ ಟ್ರಾವಿಸ್ ಹೆಡ್ ಜೊತೆ ದಾಖಲೆಯ ಜೊತೆಯಾಟವನ್ನು ನಡೆಸಿದರು. 76 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್ ಇನ್ನಿಂಗ್ಸ್ ಜವಬ್ದಾರಿ ತೆಗೆದುಕೊಂಡ ಸ್ಮಿತ್ ಹಾಗೂ ಹೆಡ್ ಬರೋಬ್ಬರಿ 285ರನ್ಗಳ ಜೊತೆಯಾಟ ನಡೆಸಿದರು.
ಈ ಜೊತೆಯಾಟದ ಮೂಲಕ ಭಾರತ ವಿರುದ್ಧದ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಪರ ನಾಲ್ಕನೇ ವಿಕೆಟ್ಗೆ ನಡೆದ ಅತಿ ದೊಡ್ಡ ಜೊತೆಯಾಟ ಇದಾಗಿದೆ. ಇದಲ್ಲದೆ ಸ್ಮಿತ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ ದಾಖಲೆ ಕೂಡ ಬರೆದಿದ್ದಾರೆ.
ಅಂತಿಮವಾಗಿ ಈ ಜೊತೆಯಾಟವನ್ನು ಸಿರಾಜ್ ಮುರಿಯುವಲ್ಲಿ ಯಶಸ್ವಿಯಾದರು. ತಮ್ಮ ಇನ್ನಿಂಗ್ಸ್ನಲ್ಲಿ 174 ಎಸೆತಗಳನ್ನು ಎದುರಿಸಿದ ಹೆಡ್ 25 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 163 ರನ್ ಸಿಡಿಸಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
Published On - 4:07 pm, Thu, 8 June 23