Updated on:Jun 04, 2023 | 10:29 AM
ಜೂನ್ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಡಬ್ಲ್ಯುಟಿಸಿ ಅಂತಿಮ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಮಾಡಲಿದ್ದಾರೆ. ಇವರಿಬ್ಬರೂ ಐಸಿಸಿ ಫೈನಲ್‌ನಲ್ಲಿ ಆಡುವ ಮೂಲಕ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಲಿದ್ದಾರೆ.
ವಾಸ್ತವವಾಗಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಟೀಂ ಇಂಡಿಯಾ ಪರ ಅತಿ ಹೆಚ್ಚು ಐಸಿಸಿ ಟ್ರೋಫಿ ಫೈನಲ್ ಪಂದ್ಯಗಳಲ್ಲಿ ಆಡಿದ ಭಾರತದ ಎರಡನೇ ಆಟಗಾರನೆನಿಸಿಕೊಂಡಿದ್ದಾರೆ. ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ಧೋನಿಯನ್ನು ಹಿಂದಿಕ್ಕಲ್ಲಿದ್ದಾರೆ.
ಟೀಂ ಇಂಡಿಯಾಕ್ಕೆ 3 ಐಸಿಸಿ ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, 2007ರಲ್ಲಿ ಮೊದಲ ಐಸಿಸಿ ಫೈನಲ್ ಆಡಿದ್ದರು. ಇದಲ್ಲದೆ, ಅವರು 2011 ರ ವಿಶ್ವಕಪ್, 2013 ರ ಚಾಂಪಿಯನ್ಸ್ ಟ್ರೋಫಿ, 2014 ರ ಟಿ20 ವಿಶ್ವಕಪ್ ಮತ್ತು 2017 ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗಳಲ್ಲಿ ಆಡಿದ್ದರು.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನಾಡುತ್ತಿರುವ ರೋಹಿತ್ ಹಾಗೂ ಕೊಹ್ಲಿ ತಲಾ 6 ಬಾರಿ ಐಸಿಸಿ ಫೈನಲ್ ಆಡಿದ ದಾಖಲೆ ಬರೆಯಲ್ಲಿದ್ದಾರೆ. ಈ ಜೋಡಿಯು ಯುವರಾಜ್ ನಂತರ ಟೀಂ ಇಂಡಿಯಾ ಪರ ಅತಿ ಹೆಚ್ಚು ಐಸಿಸಿ ಫೈನಲ್ ಪಂದ್ಯಗಳನ್ನಾಡಿದ ಆಟಗಾರರ ಪೈಕಿ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಳ್ಳಲಿದ್ದಾರೆ.
ಇದರಲ್ಲಿ ಕೊಹ್ಲಿ (ಇಲ್ಲಿ ಅಂಡರ್ 19 ವಿಶ್ವಕಪ್ ಫೈನಲ್ ಸೇರಿಸಿಲ್ಲ), 2011 ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದರು. ಇದರ ನಂತರ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ, 2014 ರಲ್ಲಿ ಟಿ20 ವಿಶ್ವಕಪ್, 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2021 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಆಡಿದ್ದರು.
ಹಾಗೆಯೇ ರೋಹಿತ್, 2007 ರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಐಸಿಸಿ ಫೈನಲ್ ಆಡಿದರು. ನಂತರ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ, 2014 ರಲ್ಲಿ ಟಿ20 ವಿಶ್ವಕಪ್, 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2021 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು.
ಇನ್ನು ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟೀಂ ಇಂಡಿಯಾ ಪರ ಅತಿ ಹೆಚ್ಚು ಐಸಿಸಿ ಟೂರ್ನಿಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. 2000ನೇ ಇಸವಿಯಲ್ಲಿ ಮೊದಲ ಐಸಿಸಿ ಫೈನಲ್‌ನಲ್ಲಿ ಆಡಿದ್ದ ಯುವರಾಜ್, 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2003ರ ಏಕದಿನ ವಿಶ್ವಕಪ್, 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2014ರ ಟಿ20 ವಿಶ್ವಕಪ್, 2017 ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಒಟ್ಟು 7 ಐಸಿಸಿ ಫೈನಲ್‌ಗಳನ್ನು ಆಡಿದ ದಾಖಲೆ ಹೊಂದಿದ್ದಾರೆ.
ಈ ನಾಲ್ವರನ್ನು ಹೊರತುಪಡಿಸಿ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ನಾಲ್ಕು ಐಸಿಸಿ ಟೂರ್ನಮೆಂಟ್ ಫೈನಲ್‌ಗಳನ್ನು ಆಡಿದ ದಾಖಲೆ ಬರೆದಿದ್ದಾರೆ.
Published On - 10:27 am, Sun, 4 June 23