- Kannada News Photo gallery Cricket photos Steve Smith Breaks Rahane's WTC Final Record: Australia vs South Africa Highlights
WTC 2025 final: 66 ರನ್ ಬಾರಿಸಿ ರಹಾನೆ ದಾಖಲೆ ಮುರಿದು ವಿಶ್ವ ದಾಖಲೆ ಸೃಷ್ಟಿಸಿದ ಸ್ಟೀವ್ ಸ್ಮಿತ್
Steve Smith Breaks Rahane's WTC Final Record: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಅಜಿಂಕ್ಯ ರಹಾನೆ ಅವರ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು 66 ರನ್ಗಳ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
Updated on: Jun 11, 2025 | 8:40 PM

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ನಾಯಕ ಟೆಂಬಾ ಬವುಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಎದುರಿಸಿತು.

ಆದರೆ ಆ ಬಳಿಕ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ತಂಡದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 66 ರನ್ಗಳ ಅತ್ಯಮೂಲ್ಯ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಬ್ಯೂ ವೆಬ್‌ಸ್ಟರ್ ಅವರೊಂದಿಗೆ ಸಂಕಷ್ಟದ ಸಂದರ್ಭದಲ್ಲಿ ಅರ್ಧಶತಕದ ಜೊತೆಯಾಟವನ್ನು ಕಟ್ಟಿದರು. ಹೀಗಾಗಿ 67 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾದ ಇನ್ನಿಂಗ್ಸ್ ಚೇತರಿಕೆ ಕಂಡಿತು.

ಇದು ಮಾತ್ರವಲ್ಲದೆ ತಮ್ಮ ಇನ್ನಿಂಗ್ಸ್ ಮೂಲಕ ಅಜಿಂಕ್ಯ ರಹಾನೆ ಅವರ ವಿಶ್ವ ದಾಖಲೆಯನ್ನು ಸಹ ಮುರಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಎರಡು ಫೈನಲ್‌ಗಳು ನಡೆದಿವೆ. ಈ ಪಂದ್ಯಕ್ಕೂ ಮೊದಲು, ಡಬ್ಲ್ಯುಟಿಸಿ ಫೈನಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ಅಜಿಂಕ್ಯ ರಹಾನೆ ಮೊದಲ ಸ್ಥಾನದಲ್ಲಿದ್ದರು. ರಹಾನೆ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 199 ರನ್ ಗಳಿಸಿದ್ದರು. ಆದರೆ ಈಗ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ.

ಲಾರ್ಡ್ಸ್‌ನಲ್ಲಿ ಸ್ಟೀವ್ ಸ್ಮಿತ್ 45 ರನ್‌ಗಳನ್ನು ಪೂರ್ಣಗೊಳಿಸಿದ ತಕ್ಷಣ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಹಾನೆಯನ್ನು ಹಿಂದಿಕ್ಕಿದರು. ಇದು ಮಾತ್ರವಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಅಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ಇದೀಗ ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದರೆ, ಅಜಿಂಕ್ಯ ರಹಾನೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ಟ್ರಾವಿಸ್ ಹೆಡ್ ಇಲ್ಲಿಯವರೆಗೆ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳನ್ನು ಆಡಿದ್ದು ಮೂರು ಇನ್ನಿಂಗ್ಸ್‌ಗಳಲ್ಲಿ 192 ರನ್ ಬಾರಿಸಿದ್ದಾರೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ಟ್ರಾವಿಸ್ ಹೆಡ್ ರಹಾನೆ ದಾಖಲೆಯನ್ನು ಮುರಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಅವರು ಕೇವಲ 11 ರನ್ ಬಾರಿಸಿ ಔಟಾದರು. ಆದರೆ ಸ್ಟೀವ್ ಸ್ಮಿತ್ ಈ ಅವಕಾಶವನ್ನು ಬಳಸಿಕೊಂಡು ನಂಬರ್ ಒನ್ ಸ್ಥಾನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಸ್ಟೀವ್ ಸ್ಮಿತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಸ್ಮಿತ್ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.









