- Kannada News Photo gallery Cricket photos WTC Final: How India and South Africa Qualify To World Test Championship final
WTC Final: ಹೀಗಾದ್ರೆ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಫೈನಲ್ ಫೈಟ್
WTC Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯವು ಜೂನ್ 11 ರಿಂದ ಶುರುವಾಗಲಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯಕ್ಕಾಗಿ ಇದೀಗ ಮೂರು ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಅದರಂತೆ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಭಾರತ... ಈ ಮೂರು ತಂಡಗಳಲ್ಲಿ ಎರಡು ಟೀಮ್ ಈ ಬಾರಿ ಫೈನಲ್ ಆಡುವುದು ಬಹುತೇಕ ಖಚಿತ.
Updated on:Jun 20, 2025 | 10:05 AM

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಎರಡು ಬಾರಿ ಫೈನಲ್ ಆಡಿದ ಏಕೈಕ ತಂಡವೆಂದರೆ ಅದು ಟೀಮ್ ಇಂಡಿಯಾ. 2021 ರಲ್ಲಿ ಚೊಚ್ಚಲ ಬಾರಿ ಫೈನಲ್ಗೆ ಪ್ರವೇಶಿಸಿದ್ದ ಟೀಮ್ ಇಂಡಿಯಾ ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಪರಾಜಯಗೊಂಡಿತ್ತು. ಇದಾದ ಬಳಿಕ 2023 ರಲ್ಲಿ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸುವ ಮೂಲಕ ಭಾರತ ತಂಡ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿತು. ಇದೀಗ ಮೂರನೇ ಬಾರಿಗೆ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸುವ ಹೊಸ್ತಿಲಲ್ಲಿದೆ.

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದರೆ ಫೈನಲ್ಗೆ ಪ್ರವೇಶಿಸುವುದು ಖಚಿತ. ಅತ್ತ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 2-0 ಅಂತರದಿಂದ ಗೆಲುವು ದಾಖಲಿಸಿದರೂ, ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳಲಿದೆ.

ಹಾಗೆಯೇ ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡಕ್ಕೆ ಫೈನಲ್ಗೆ ಎಂಟ್ರಿ ಕೊಡಲು ಬೇಕಿರುವುದು ಕೇವಲ 1 ಜಯ ಮಾತ್ರ. ಪಾಕಿಸ್ತಾನ್ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಒಂದು ಗೆಲುವು ದಾಖಲಿಸಿದರೆ ಸೌತ್ ಆಫ್ರಿಕಾ ತಂಡ ಫೈನಲ್ ಆಡುವುದು ಖಚಿತವಾಗಲಿದೆ.

ಅಂದರೆ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 2 ಜಯ ಸಾಧಿಸಿದರೆ, ಅತ್ತ ಸೌತ್ ಆಫ್ರಿಕಾ ತಂಡವು 1 ಗೆಲುವು ದಾಖಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಹೀಗಾಗಿಯೇ ಈ ಬಾರಿ ಭಾರತ ತಂಡದ ಎದುರಾಳಿಯಾಗಿ ಸೌತ್ ಆಫ್ರಿಕಾ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯವು ಮುಂದಿನ ವರ್ಷ ಜೂನ್ 11 ರಿಂದ 15 ರವರಗೆ ನಡೆಯಲಿದೆ. ಈ ಪಂದ್ಯದಲ್ಲಿ WTC ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಕಣಕ್ಕಿಳಿಯಲಿದೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇದೀಗ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ 2ನೇ ಸ್ಥಾನಕ್ಕೇರಬಹುದು. ಈ ಮೂಲಕ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಬಹುದು. ಅದರಂತೆ ಜೂನ್ 11 ರಿಂದ ಶುರುವಾಗಲಿರುವ ಮೂರನೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.
Published On - 10:20 am, Mon, 23 December 24
