- Kannada News Photo gallery Cristiano Ronaldo Reaches 1 Billion Followers on Social Media platforms kannada news
Cristiano Ronaldo: 100 ಕೋಟಿ ಫಾಲೋವರ್ಸ್..! ಇತಿಹಾಸ ಸೃಷ್ಟಿಸಿದ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೋ ರೊನಾಲ್ಡೊ
Cristiano Ronaldo: ಫುಟ್ಬಾಲ್ ಅಂಗಳದಲ್ಲಿ ಒಂದಿಲ್ಲೊಂದು ದಾಖಲೆಗಳನ್ನು ಬರೆಯುತ್ತಿದ್ದ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಸೋಶಿಯಲ್ ಮೀಡಿಯಾದಲ್ಲೂ ದಾಖಲೆಗಳ ಶಿಖರವನ್ನೇರಿದ್ದಾರೆ. 1 ಕೋಟಿ ಫಾಲೋವರ್ಸ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗಿರುವ ಈ ಕಾಲದಲ್ಲಿ ರೊನಾಲ್ಡೊ, ಬರೋಬ್ಬರಿ 1 ಬಿಲಿಯನ್ ಅಂದರೆ 100 ಕೋಟಿ ಅನುಯಾಯಿಗಳನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Updated on: Sep 13, 2024 | 3:03 PM

ಇಷ್ಟು ದಿನ ಫುಟ್ಬಾಲ್ ಅಂಗಳದಲ್ಲಿ ಒಂದಿಲ್ಲೊಂದು ದಾಖಲೆಗಳನ್ನು ಬರೆಯುತ್ತಿದ್ದ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಸೋಶಿಯಲ್ ಮೀಡಿಯಾದಲ್ಲೂ ದಾಖಲೆಗಳ ಶಿಖರವನ್ನೇರಿದ್ದಾರೆ. 1 ಕೋಟಿ ಫಾಲೋವರ್ಸ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗಿರುವ ಈ ಕಾಲದಲ್ಲಿ ರೊನಾಲ್ಡೊ, ಬರೋಬ್ಬರಿ 1 ಬಿಲಿಯನ್ ಅಂದರೆ 100 ಕೋಟಿ ಅನುಯಾಯಿಗಳನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮಾಹಿತಿಯನ್ನು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿರುವ ರೊನಾಲ್ಡೊ, ‘ಪ್ರತಿ ಹೆಜ್ಜೆಯಲ್ಲೂ, ಪ್ರತಿ ಏರಿಳಿತದಲ್ಲೂ ನೀನು ನನ್ನೊಂದಿಗಿರುವೆ. ಈ ಪಯಣ ನಮ್ಮ ಪಯಣ. ನಾವು ಏನನ್ನು ಸಾಧಿಸಬಹುದು ಎಂಬುದಕ್ಕೆ ಯಾವುದೇ ಮಿತಿಗಳಿಲ್ಲ ಎಂದು ನಾವು ಒಟ್ಟಾಗಿ ತೋರಿಸಿದ್ದೇವೆ. ನನ್ನನ್ನು ನಂಬಿದ್ದಕ್ಕಾಗಿ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನ ಜೀವನದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಉತ್ತಮವಾದದ್ದು ಇನ್ನೂ ಬರಬೇಕಿದೆ. ನಾವು ಒಟ್ಟಾಗಿ ಶ್ರಮಿಸುತ್ತೇವೆ ಮತ್ತು ಇತಿಹಾಸವನ್ನು ರಚಿಸುತ್ತೇವೆ ಎಂದಿದ್ದಾರೆ.

ಪೋರ್ಚುಗೀಸ್ ಸೂಪರ್‌ಸ್ಟಾರ್ ರೊನಾಲ್ಡೊ ಇತ್ತೀಚೆಗಷ್ಟೇ 'ಯುರ್ ಕ್ರಿಸ್ಟಿಯಾನೋ' ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. ಕೇವಲ 90 ನಿಮಿಷಗಳಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದಿದ್ದ ರೊನಾಲ್ಡೊ, 12 ಗಂಟೆಗಳಲ್ಲಿ ಫಾಲೋವರ್ಸ್ಗಳ ಸಂಖ್ಯೆ 10 ಮಿಲಿಯನ್ ದಾಟಿತ್ತು. ಪ್ರಸ್ತುತ ರೊನಾಲ್ಡೊ ಅವರ ಯೂಟ್ಯೂಬ್‌ಗೆ 60.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಉಳಿದಂತೆ ಇನ್ಸ್ಟಾಗ್ರಾಮ್ನಲ್ಲಿ 638 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ರೊನಾಲ್ಡೊ, ಎಕ್ಸ್ನಲ್ಲಿ (ಹಿಂದಿನ Twitter) 113 ಮಿಲಿಯನ್ ಫಾಲೋವರ್ಸ್ ಮತ್ತು ಫೇಸ್ಬುಕ್ನಲ್ಲಿ 170 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇದಲ್ಲದೆ, ಚೀನಾದ ಸಾಮಾಜಿಕ ಮಾಧ್ಯಮ ವೈಬೊದಲ್ಲಿ 7.3 ಮಿಲಿಯನ್ ಅನುಯಾಯಿಗಳು ಮತ್ತು ಕುಯಿಶೌನಲ್ಲಿ 9.3 ಮಿಲಿಯನ್ ಅನುಯಾಯಿಗಳು ಇದ್ದಾರೆ.

ರೊನಾಲ್ಡೊ ಇತ್ತೀಚೆಗೆ ನೇಷನ್ಸ್ ಲೀಗ್‌ನಲ್ಲಿ ಕ್ರೊಯೇಷಿಯಾ ವಿರುದ್ಧ ಗೋಲು ಗಳಿಸುವ ಮೂಲಕ ಫುಟ್‌ಬಾಲ್‌ನಲ್ಲಿ 900 ಗೋಲುಗಳನ್ನು ಗಳಿಸಿದ ದಾಖಲೆಯನ್ನು ರಚಿಸಿದರು. ಇದರೊಂದಿಗೆ ಈ ಐತಿಹಾಸಿಕ ದಾಖಲೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

39 ವರ್ಷ ವಯಸ್ಸಿನ ರೊನಾಲ್ಡೊ ತಮ್ಮ ಅಂತರಾಷ್ಟ್ರೀಯ ಮತ್ತು ಕ್ಲಬ್ ಫುಟ್ಬಾಲ್ ವೃತ್ತಿಜೀವನದಲ್ಲಿ ಇದುವರೆಗೆ 900 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. 2002ರಲ್ಲಿ ವೃತ್ತಿ ಜೀವನ ಆರಂಭಿಸಿದ ರೊನಾಲ್ಡೊ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 132 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ರಿಯಲ್ ಮ್ಯಾಡ್ರಿಡ್ ಪರ 458 ಗೋಲು ಬಾರಿಸಿರುವ ರೊನಾಲ್ಡೊ , ಮ್ಯಾಂಚೆಸ್ಟರ್ ಯುನೈಟೆಡ್ ಪರ 145, ಜುವೆಂಟಸ್ ಪರ 101 ಮತ್ತು ಅವರ ಪ್ರಸ್ತುತ ಫುಟ್‌ಬಾಲ್ ಕ್ಲಬ್ ಅಲ್ ನಾಸ್ರ್‌ಪರ 68 ಗೋಲುಗಳನ್ನು ಗಳಿಸಿದ್ದಾರೆ. ಹಾಗೆಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸ್ಪೋರ್ಟಿಂಗ್ ಲಿಸ್ಬನ್ ಪರ 5 ಗೋಲುಗಳನ್ನು ಗಳಿಸಿದ್ದಾರೆ.




