
ನಾಡಿನಾದ್ಯಂತ ದಸರಾ ಹಬ್ಬದ ಮೆರುಗು ಹಾಗೂ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ಮೊದಲ ದಿನವೇ ಎಲ್ಲೆಡೆ ಗೊಂಬೆಗಳ ಕಲರವ ಕಳೆಗಟ್ಟಿದೆ.
ಬೆಂಗಳೂರಿನ ರೇಸ್ ಕೋರ್ಸ್ ಬಳಿಯ ವಿದ್ಯಾಭವನದಲ್ಲಿ ನವರಾತ್ರಿಯ ವಿಶೇಷವಾಗಿ ರಾಮಾಯಣದ ಪ್ರಮುಖ ಘಟ್ಟಗಳನ್ನು ಒಳಗೊಂಡ ಆಕರ್ಷಕ ಗೊಂಬೆಗಳ ಪ್ರದರ್ಶನವನ್ನು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ವಿದ್ಯಾಭವನದ ಅಧ್ಯಕ್ಷ ಕೆ.ಜಿ ರಾಘವನ್ ಹಾಗೂ ಜಂಟಿ ಕಾರ್ಯದರ್ಶಿ ನಾಗಲಕ್ಷ್ಮಿ ಉಪಸ್ಥಿತರಿದ್ದರು.
ಪುಷ್ಟಕಾಮೇಷ್ಟಿ ಯಜ್ಞ, ಶ್ರೀರಾಮನ ಜನನ, ಸೀತಾರಾಮ ಕಲ್ಯಾಣ, ಲಕ್ಷ್ಮಣರೇಖಾ, ಶಬರಿಯ ಭಕ್ತಿ ಹಾಗೂ ಅಶೋಕ ವಾಟಿಕಾದಂತಹ ರೋಚಕ ಸನ್ನಿವೇಶಗಳನ್ನು ಗೊಂಬೆಗಳ ಮೂಲಕ ಸುಂದರವಾಗಿ ವಿವರಿಸಲಾಗಿದೆ.
ಇದರೊಂದಿಗೆ 2024ರ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಫೈನಲ್ ರೋಚಕ ಪಂದ್ಯವನ್ನೂ ಸಹ ಗೊಂಬೆಗಳ ಮೂಲಕ ಸೃಜನಶೀಲವಾಗಿ ಸ್ಮರಿಸಲಾಯಿತು.
ವಿವಿಧ ಶಕ್ತಿ ದೇವತೆಗಳ ಆಕರ್ಷಕ ಗೊಂಬೆಗಳು ಪ್ರದರ್ಶನದಲ್ಲಿ ಇರಿಸಲಾಗಿದ್ದು, ಆಗಮಿಸಿದ್ದ ಎಲ್ಲಾ ನೋಡುಗರ ಮನಸ್ಸಿನಲ್ಲಿ ವಿಶೇಷವಾದ ಭಕ್ತಿ ಭಾವವನ್ನು ಉಂಟುಮಾಡಿದವು.