- Kannada News Photo gallery Dharwad: College Students Celebrate Traditional Attire Day, Karnataka news in kannada
ಜಾನಪದ ಉಡುಗೆ ತೊಡುಗೆ ಸ್ಪರ್ಧೆ: ಸೀರೆಯಲ್ಲಿ ಮಿಂಚಿದ ವಿದ್ಯಾರ್ಥಿನಿಯರು
ಧಾರವಾಡದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಜಾನಪದ ಉತ್ಸವದ ಭಾಗವಾಗಿ ವಿವಿಧ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಸಂಭ್ರಮಿಸಿದರು. ವಿಭಿನ್ನ ಸಮುದಾಯಗಳ ವೇಷಭೂಷಣ, ನೃತ್ಯ ಮತ್ತು ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಕೃತಿಯನ್ನು ಆಚರಿಸಲು ಮತ್ತು ಪರೀಕ್ಷಾ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
Updated on: Mar 09, 2025 | 3:51 PM

ಅವರೆಲ್ಲ ಪದವಿ ಕಾಲೇಜಿನ ವಿದ್ಯಾರ್ಥಿನಿಯರು. ಮೇಲಾಗಿ ಅವರು ಓದುತ್ತಿರುವುದು ಸರ್ಕಾರಿ ಕಾಲೇಜಿನಲ್ಲಿ. ಹೀಗಾಗಿ ಅಲ್ಲಿ ಯೂನಿಫಾರ್ಮ್ ಕಡ್ಡಾಯ. ಅಂತಹ ಕಾಲೇಜಿಗೆ ಸೀರೆಯ ಜೊತೆಗೆ ವಿವಿಧ ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ಬರುವಂತೆ ಹೇಳಿದರೆ ಹೇಗಿರಬೇಡ? ವಿದ್ಯಾರ್ಥಿಗಳ ಪಾಲಿಗೆ ಅದೊಂದು ಹಬ್ಬವೇ ಆಗಿ ಬಿಡುತ್ತೆ. ಅಂಥ ಸಂಭ್ರಮಕ್ಕೆ ಧಾರವಾಡದ ಸರ್ಕಾರಿ ಕಾಲೇಜೊಂದು ಸಾಕ್ಷಿಯಾಗಿತ್ತು.

ಧಾರವಾಡ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಳೆದೊಂದು ವಾರದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜಾನಪದವನ್ನೇ ಹಿನ್ನೆಲೆಯನ್ನಾಗಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾನಪದ ಉತ್ಸವದ ಹೆಸರಿನಲ್ಲಿ ಆಯಾ ಪ್ರದೇಶದ ಸಂಸ್ಕೃತಿ, ಆಚಾರ-ವಿಚಾರ, ಆಹಾರ ಪದಾರ್ಥಗಳನ್ನು ಪ್ರತಿಬಿಂಬಿಸುವ ಸ್ಪರ್ಧೆ ಇದರಲ್ಲಿ ಸೇರಿದೆ.

ಕೊನೆಯ ದಿನವಾದ ಇಂದು ವಿದ್ಯಾರ್ಥಿಗಳಿಗೆ ಜಾನಪದ ಉಡುಗೆ ತೊಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧಾಳುಗಳು ಆಯಾ ಪ್ರದೇಶ, ಸಮುದಾಯದ ವೇಷಭೂಷಣದಲ್ಲಿ ಬಂದಿದ್ದರೆ, ಉಳಿದ ವಿದ್ಯಾರ್ಥಿನಿಯರು ಬಗೆಬಗೆಯ ಸೀರೆಯುಟ್ಟು ಬಂದು ಸಂಭ್ರಮಿಸಿದರು.

ವಿದ್ಯಾರ್ಥಿಗಳು ತರಗತಿ, ಅಭ್ಯಾಸ, ಪರೀಕ್ಷೆ ಎಲ್ಲವನ್ನು ಬದಿಗಿಟ್ಟು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ದಿನವೂ ಯೂನಿಫಾರ್ಮ್ನಲ್ಲೇ ಬರುತ್ತಿದ್ದವರಿಗೆ ಸೀರೆಯುಟ್ಟು ಬನ್ನಿ ಅಂತಾ ಹೇಳಿದ್ದಂತೂ ದೊಡ್ಡ ಖುಷಿ ನೀಡಿತ್ತು. ಅದರಲ್ಲಿಯೂ ಈ ಕಾಲೇಜಿಗೆ ಬರೋದು ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು. ಹೀಗಾಗಿ ಅನೇಕರು ತಮ್ಮ ತಾಯಿ, ಅಜ್ಜಿಯರ ಸೀರೆಗಳನ್ನು ಉಟ್ಟುಕೊಂಡು ಬಂದಿದ್ದಲ್ಲದೇ ಅವರ ಸಾಂಪ್ರದಾಯಿಕ ಒಡವೆಗಳನ್ನು ಧರಿಸಿದ್ದರು. ನಡುಪಟ್ಟಿ, ಬೋರಮಳ ಸರ, ಡಾಬು, ಕಾಸಿನ ಸರ, ಮೂಗುತಿಯನ್ನು ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ಸಂಭ್ರಮವೇ ಅದ್ಭುತವಾಗಿತ್ತು.

ಇನ್ನು ಸ್ಪರ್ಧೆಯಲ್ಲಿ ಕೊಡವ ಸಮುದಾಯದ ನೃತ್ಯ, ಲಂಬಾಣಿ ವೇಷದ ನೃತ್ಯ, ಮಲಯಾಳಂ, ರಾಜಸ್ತಾನಿ, ಮರಾಠಿ ಸಂಪ್ರದಾಯದ ರೂಪಕಗಳನ್ನು ಪ್ರಸ್ತುತಪಡಿಸಿದ ವಿದ್ಯಾರ್ಥಿನಿಯರು ಅಚ್ಚರಿ ಮೂಡಿಸಿದರು. ಇನ್ನು ಕೆಲವು ರೈತ ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯರು ಉತ್ತರ ಕರ್ನಾಟಕದ ರೈತ ಮಹಿಳೆಯಂತೆ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ ಹಿಡಿದು ಜವಾರಿ ಭಾಷೆಯ ಡೈಲಾಗ್ ಹೊಡೆದು ಗಮನ ಸೆಳೆದರು.

ವರ್ಷಕ್ಕೊಂದು ಬಾರಿ ಈ ಕಾಲೇಜಿನಲ್ಲಿ ಇಂಥದ್ದೊಂದು ಸಂಭ್ರಮದ ವಾತಾವರಣೆ ಇರುತ್ತೆ. ಈ ಬಾರಿಯೂ ಹೊಸ ಬಗೆಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಒಟ್ಟಿನಲ್ಲಿ ಇನ್ನೇನು ಪರೀಕ್ಷೆಗಳು ಆರಂಭವಾಗುತ್ತವೆ ಅನ್ನೋ ಆತಂಕದ ಸಂದರ್ಭದಲ್ಲಿ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಈ ವಿಧಾನ ಮೆಚ್ಚುವಂಥದ್ದು.



















