ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಪರಿಣಾಮ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಇದ ಉಪ ನದಿಗಳಾದ ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಂಗಳವಾರವೂ ಪ್ರವಾಹ ಆರ್ಭಟ ಮುಂದುವರೆದಿದೆ. ಪ್ರವಾಹಕ್ಕೆ ಜನ ಜೀವನ ತತ್ತರವಾಗಿದೆ.
ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಬದಾಮಿ ತಾಲೂಕಿನ ಗೋವನಕೊಪ್ಪ ಹಳೆ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಸೇತುವೆ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಗೋವಿನಜೋಳ ಬೆಳೆ ಜಲಾವೃತಗೊಂಡಿದೆ.
ಮಂಗಳವಾರ ಬೆಳಗ್ಗೆ ಕಲಾದಗಿ-ಅಂಕಲಗಿ (ಕಾತರಕಿ) ಬ್ರಿಡ್ಜ್ ಕಂ ಬ್ಯಾರೇಜ ಸೇತುವೆ ಮೇಲೆ ನೀರು ಹರಿದಿದೆ. ಇದರಿಂದ 20ಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಕಾತರಕಿ, ಆಲಗುಂಡಿ, ಕುಂದರಗಿ, ಅರಕೇರಿ ಭಾಗದ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳಿಗೆ ತೆರಳುವವರು 15 ಕಿ.ಮೀ ಸುತ್ತುವರೆದು ಸಾಗಬೇಕಾಗುವ ಪರಿಸ್ಥಿತಿ ಬಂದಿದೆ. ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ತೆರಳುವ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ. ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.
ಭಾರಿ ಮಳೆಯಿಂದ ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಬಳಿಯ ಸೇತುವೆ ಜಲಾವೃತಗೊಂಡಿದೆ. ಮುಧೋಳ, ಜಮಖಂಡಿ ಮಾರ್ಗವಾಗಿ ಸಾಂಗ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಚಖಂಡಿ ಸೇತುವೆ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಜಲಾವೃತಗೊಂಡಿದೆ. ಪ್ರತಿ ಬಾರಿ ಪ್ರವಾಹ ಬಂದಾಗ ಬೆಳೆ ಜಲಾವೃತ ಆಗುತ್ತವೆ. ಸರ್ಕಾರ ಕೊಡುವ ಪರಿಹಾರ ಯಾವುದಕ್ಕೂ ಆಗೋದಿಲ್ಲ. ನಮ್ಮ ಭೂಮಿಗೆ ಶಾಸ್ವತ ಪರಿಹಾರ ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ. ಜಲಾವೃತವಾದ ಸೇತುವೆ ನೋಡಲು ಜನರು ಬರುತ್ತಿದ್ದಾರೆ.
ಪ್ರವಾಹ ಹೊಡೆತಕ್ಕೆ ಸರಿಸೃಪಗಳು, ಇರುವೆಗಳು ಪರದಾಡುತ್ತಿವೆ. ಜೀವರಕ್ಷಿಸಿಕೊಳ್ಳಲು ಜೀವಜಂತುಗಳ ಹೋರಾಡುತ್ತಿವೆ. ಸೇತುವೆ ಕಂಬಗಳಿಗೆ, ಕಸ ಕಂಟಿಗಳಿಗೆ ರಾಶಿ ರಾಶಿಯಾಗಿ ಇರುವೆಗಳು ಮೆತ್ತಿಕೊಂಡಿವೆ.
ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಉಪ್ಪಾರ ಒಣಿ ಜಲಾವೃತಗೊಂಡಿದೆ. ಮನೆಯಲ್ಲಿ ಏಳೆಂಟು ಅಡಿ ನೀರು ನಿಂತಿದೆ. ದನದ ಕೊಟ್ಟಿಗೆ, ಮನೆಗಳು ಮುಳುಗಡೆಯಾಗಿವೆ. ಗ್ರಾಮದ ಸಾವಿರಾರು ಎಕರೆ ಕಬ್ಬು ಜಲಾವೃತಗೊಂಡಿದೆ.
Published On - 11:38 am, Tue, 30 July 24