- Kannada News Photo gallery Follow this tips to resolve mother-in-law and daughter-in-law quarrel Kannada News
Relationship Tips : ಅತ್ತೆ ಸೊಸೆ ಜಗಳಕ್ಕೆ ಇದು ಕೊನೆಯ ಪರಿಹಾರ, ಈ ಟಿಪ್ಸ್ ಪಾಲಿಸಿ
ಅತ್ತೆ ಸೊಸೆ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಎಲ್ಲರ ಮನೆಯಲ್ಲಿಯು ಅತ್ತೆ ಸೊಸೆ ಜಗಳವು ಮಾಮೂಲಿ. ಇವರಿಬ್ಬರ ನಡುವೆ ಸಿಲುಕಿಕೊಳ್ಳುವ ಗಂಡು ಮಕ್ಕಳ ಪಾಡು ಕೇಳುವವರು ಮಾತ್ರ ಯಾರು ಇಲ್ಲ. ಅತ್ತೆ ಸೊಸೆ ಜಗಳವು ನಿಮ್ಮ ಮನೆಯಲ್ಲಿ ಮಾಮೂಲಿಯಾಗಿದ್ದರೆ ಗಂಡಸರೇ ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.
Updated on: Jun 26, 2024 | 4:00 PM

ದಾಂಪತ್ಯ ಸುಖಕರವಾಗಿರಲು ಪತಿ ಮಾತ್ರ ಒಳ್ಳೆಯರಾಗಿದ್ದರೆ ಸಾಕಾಗುವುದಿಲ್ಲ. ಅತ್ತೆ, ಮಾವ ಸೇರಿದಂತೆ ಮನೆಯಲ್ಲಿರುವ ಎಲ್ಲರೂ ಪ್ರೀತಿಯಿಂದ ಇದ್ದರೆ ಮಾತ್ರ ಜೀವನವು ನೆಮ್ಮದಿಯುತವಾಗಿರುತ್ತದೆ. ಆದರೆ ಎಲ್ಲರ ಮನೆಯಲ್ಲಿಯು ಅತ್ತೆ ಸೊಸೆ ಎಂದ ಮೇಲೆ ಸಣ್ಣ ಪುಟ್ಟ ಮುನಿಸು, ಜಗಳಗಳು ಇದ್ದೆ ಇರುತ್ತದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಮಾತಿದೆ. ಆದರೆ ಅತ್ತೆ ಸೊಸೆ ಜಗಳದಲ್ಲಿ ಸಿಲುಕಿಹಾಕಿಕೊಳ್ಳುವವನೇ ಈ ಗಂಡು. ಹೀಗಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಂಡು ಎಷ್ಟು ಸೂಕ್ಷ್ಮವಾಗಿ ಪತ್ನಿ ಹಾಗೂ ತಾಯಿಯನ್ನು ನಿಭಾಯಿಸಿಕೊಂಡು ಹೋಗುತ್ತಾನೆ ಎನ್ನುವುದು ಬಹಳ ಮುಖ್ಯ.

ಅತ್ತೆ-ಸೊಸೆ ಜಗಳದಲ್ಲಿ ಪುರುಷರು ಬಲಿಪಶುವಾಗುತ್ತಾರೆ. ಎಷ್ಟೋ ಸಲ ಇಬ್ಬರಿಗೂ ಸಪೋರ್ಟ್ ಮಾಡಲು ಸಾಧ್ಯವಾಗದೇ ಸುಮ್ಮನಿರಬೇಕಾಗುತ್ತದೆ. ಹೀಗಾಗಿ ಗಂಡು ಮಕ್ಕಳು ಇವರಿಬ್ಬರ ಜಗಳವನ್ನು ಬಿಡಿಸಲು ಹೋಗದೇ ಇರುವುದೇ ಉತ್ತಮ.

ಎಲ್ಲವು ತಿಳಿಯಾದ ನಂತರ ಅತ್ತೆ ಸೊಸೆ ಇಬ್ಬರನ್ನು ಕೂರಿಸಿಕೊಂಡು ಅರ್ಥ ಆಗುವಂತೆ ಬುದ್ಧಿ ಹೇಳುವುದು ಒಳ್ಳೆಯದು. ಆದರೆ ಈ ವೇಳೆಯಲ್ಲಿ ಒಬ್ಬರನ್ನೇ ವಹಿಸಿಕೊಂಡು ಮಾತನಾಡಬೇಡಿ. ಇದರಿಂದ ನಿಮ್ಮ ಮೇಲೆ ತಾಯಿ ಅಥವಾ ಹೆಂಡತಿಯು ಮುನಿಸಿಕೊಳ್ಳಬಹುದು.

ಗಂಡನಾದವನು ಮಗ ಹಾಗೂ ಪತಿ ಎರಡು ಸಂಬಂಧವನ್ನು ನಿಭಾಯಿಸಿಕೊಂಡು ಹೋಗಬೇಕು. ಹೀಗಾಗಿ ಪತ್ನಿ ಹಾಗೂ ತಾಯಿಗೆ ಸದಾ ಪ್ರಶಂಸನೀಯ ಮಾತುಗಳನ್ನೇ ಆಡುವುದನ್ನು ಕಲಿಯಿರಿ. ಆಗ ಇಬ್ಬರನ್ನು ಖುಷಿಯಲ್ಲಿರಿಸಲು ಸಾಧ್ಯ.

ಪತ್ನಿಯ ಬಳಿ ಅತ್ತೆಯ ಸ್ವಭಾವದ ಬಗ್ಗೆ ಮೊದಲೇ ಹೇಳಿಡಿ. ಒರಟಾದ ಅತ್ತೆಯನ್ನು ಮೃದುವಾಗಿ ಮಾತನಾಡಿಸುವ ಕಲೆಯನ್ನು ಪತ್ನಿಗೂ ಗೊತ್ತಿರಲಿ. ಹೀಗಾದಾಗ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಪತ್ನಿಯಾಗಿದ್ದರೆ ಅತ್ತೆಯನ್ನು ಪ್ರೀತಿಯಿಂದ ಕಾಣುತ್ತಾಳೆ.

ಹೊರಗಡೆ ಸುತ್ತಾಡಲು ಹೋಗುವ ವೇಳೆ ಹೆಂಡತಿ ಮಕ್ಕಳ ಜೊತೆಗೆ ತಾಯಿಯನ್ನು ಕರೆದುಕೊಂಡು ಹೋಗಿ. ಒಂದು ವೇಳೆ ಬರಲು ಒಪ್ಪದಿದ್ದರೆ ಅಮ್ಮನಿಗೆ ಏನಾದರೂ ತಂದುಕೊಟ್ಟರೆ ಖುಷಿಯಾಗುತ್ತಾಳೆ. ಇದರಿಂದ ಎಷ್ಟೋ ಮನೆಯಲ್ಲಿ ಅತ್ತೆ ಸೊಸೆ ಜಗಳವು ನಡೆಯುವುದಿಲ್ಲ.

ತಾಯಿಯು ನಿಮ್ಮನ್ನು ಇಷ್ಟು ದೊಡ್ಡವನ್ನಾಗಿ ಮಾಡಲು ಪಟ್ಟ ಶ್ರಮದ ಬಗ್ಗೆ ಹೆಂಡತಿಗೆ ಹೇಳಿ. ಇದರಿಂದ ಆಕೆಗೆ ಅತ್ತೆಯ ಮೇಲೆ ಗೌರವವು ಹೆಚ್ಚುತ್ತದೆ. ಅಷ್ಟೇ ಅಲ್ಲದೇ ಹೆಂಡತಿಯು ತನ್ನವರೆಲ್ಲರನ್ನು ಬಿಟ್ಟು ನನ್ನನ್ನೇ ನಂಬಿ ಬಂದಿದ್ದಾಳೆ ಎನ್ನುವುದನ್ನು ತಾಯಿಗೆ ಅರ್ಥ ಮಾಡಿಸಿ. ಇದರಿಂದ ಅತ್ತೆ ಸೊಸೆಯರಿಬ್ಬರೂ ಹೊಂದಿಕೊಂಡು ಹೋಗುತ್ತಾರೆ.

ಗಂಡ ಹೆಂಡತಿಯ ಜಗಳ ನಡುವೆ ತಾಯಿಯು ಬರುವುದನ್ನು ಆದಷ್ಟು ತಪ್ಪಿಸಿ. ಒಂದು ವೇಳೆ ಅತ್ತೆ ಹೋದರೆ ಸೊಸೆಗೆ ಅತ್ತೆಯ ಮೇಲೆ ದ್ವೇಷದ ಭಾವನೆಯು ಬರಬಹುದು. ಹೆಂಡತಿಯು ಅತ್ತೆಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಹುದು. ಹೀಗಾಗಿ ನಿಮ್ಮ ತಾಯಿಯ ಬಳಿ ಜಗಳವಾದಾಗ ಸುಮ್ಮನಿರು ಎಂದು ಮೊದಲೇ ಹೇಳಿಬಿಡುವುದು ಒಳ್ಳೆಯದು.



















