ಗದಗ ಫಲಪುಷ್ಪ ಪ್ರದರ್ಶನ: ಸಿರಿಧಾನ್ಯಗಳಲ್ಲಿ ಮೂಡಿಬಂದ ಬಸವೇಶ್ವರರ ಮೂರ್ತಿ
ಗದಗದ ವ್ಹಿಡಿಎಸ್ಟಿ ಮೈದಾನದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಜರುಗುತ್ತಿದೆ. ಹಣ್ಣು, ಹೂವುಗಳಿಂದ ರಚಿಸಲಾದ ವಿಶಿಷ್ಟ ಕಲಾಕೃತಿಗಳು, ಸೆಲ್ಫಿ ಸ್ಟ್ಯಾಂಡ್‌ಗಳು ಆಕರ್ಷಣೆಯ ಕೇಂದ್ರವಾಗಿವೆ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಸಬರಮತಿ ಆಶ್ರಮದ ಪ್ರತಿಕೃತಿ, ಗಾಂಧೀಜಿ ಪ್ರತಿಮೆ, ಜಗಜ್ಯೋತಿ ಬಸವೇಶ್ವರ, ಡಾ. ಅಂಬೇಡ್ಕರ್ ಪ್ರತಿಮೆಗಳು ಪ್ರದರ್ಶನದ ಹೈಲೈಟ್ ಆಗಿವೆ.
Updated on:Mar 03, 2025 | 11:47 AM

ಗದಗ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ನಗರದ ವ್ಹಿಡಿಎಸ್ಟಿ ಮೈದಾನದಲ್ಲಿ, ಫಲ ಫುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂ, ಹಣ್ಣುಗಳಲ್ಲಿ ನಿರ್ಮಿಸಲಾದ ವಿವಿಧ ಬಗೆಯ ಚಿತ್ತಾಕರ್ಷಕ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಹೂವಿನಲ್ಲಿ ಅಲಂಕೃತಗೊಂಡ ಸೆಲ್ಫಿ ಸ್ಟ್ಯಾಂಡ್ ಬಹುತೇಕ ಜನರನ್ನ ಆಕರ್ಷಿಸುತ್ತಿದೆ.

ಹೂವಿನಲ್ಲಿ ಅಲಂಕಾರಗೊಂಡ ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡಿರುವ ಐದು ಗ್ಯಾರಂಟಿ ಯೋಜನೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದವು. ಭೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಎಂಬ ಸಂದೇಶ ಸಾರುತ್ತಿತ್ತು.

ಪುಷ್ಪಗಳಿಂದ ಅಲಂಕೃತಗೊಂಡ ಸಬರಮತಿ ಆಶ್ರಮದ ಪ್ರತಿಕೃತಿ, ಅದರಲ್ಲಿ ಸಿರಿಧಾನ್ಯದಿಂದ ತಯಾರಿಸಿದ ನನ್ನ ಜೀವನ ನನ್ನ ಸಂದೇಶ ಸಾರುವ ಗಾಂಧೀಜಿ ಪ್ರತಿಮೆ ದೇಶಭಕ್ತಿಯನ್ನು ಬಿಂಬಿಸುತ್ತಿತ್ತು. ಇನ್ನು ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಕಲಾಕೃತಿಗಳಾದ ಸಿದ್ದೇಶ್ವರ ಸ್ವಾಮಿಜಿ, ಪಂಡಿತ ಪುಟ್ಟರಾಜ ಗವಾಯಿ, ಆಲೂರು ವೆಂಕಟರಾಯರು, ಸುನೀಲ ಜೋಶಿ, ಗಮನ ಸೆಳೆದವು.

ಈ ಭಾರಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಿದ್ದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ, ಬ್ರಹ್ಮಜಿನಾಲಯ ಪ್ರತಿಕೃತಿ ಶಿಲ್ಪಕಲೆ ಸಾಹಿತ್ಯವನ್ನು ಬಿಂಬಿಸುತ್ತಿತ್ತು. ವಿವಿಧ ಪುಷ್ಪಗಳಿಂದ ತಯಾರಿಸಿದ ಐಪೆಲ್ ಟಾವರ್ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಕಲಾಕೃತಿಗಳಾದ ಜಗಜ್ಯೋತಿ ಬಸವೇಶ್ವರ, ಡಾ. ಬಿ.ಆರ್.ಅಂಬೇಡ್ಕರ್, ಗೌತಮ ಬುದ್ಧ ಕಲಾಕೃತಿಗಳು ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.
Published On - 11:47 am, Mon, 3 March 25
























