- Kannada News Photo gallery Hasanamba Temple Darshan: First day joy of the devotees in the presence of Hasanamba
Hasanamba Darshan: ಹಾಸನಾಂಬೆ ಉಘೇ ಉಘೇ; ಹಾಸನಾಂಬಾ ಸನ್ನಿಧಿಯಲ್ಲಿ ಭಕ್ತರ ಹರ್ಷೋದ್ಘಾರ
ಲಕ್ಷ ಲಕ್ಷ ಭಕ್ತರ ಕಾತರ, ಶಕ್ತಿದೇವತೆಯನ್ನು ಕಣ್ಣುತುಂಬಿಕೊಳ್ಳುವ ಕುತೂಹಲ. ಅಧಿದೇವತೆಯ ಪವಾಡಗಳನ್ನು ಕಣ್ಣಾರೆ ಕಾಣುವ ಹಂಬಲ. ವರ್ಷದಿಂದ ಭಕ್ತರು ಕಾಯುತ್ತಿದ್ದ ಆ ಒಂದು ಕ್ಷಣ ಕಡೆಗೂ ಬಂದಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನೋತ್ಸವ ಗುರುವಾರದಿಂದ ಆರಂಭಗೊಂಡಿದೆ. ಮದ್ಯಾಹ್ನ 12 ಗಂಟೆ 10 ನಿಮಿಷಕ್ಕೆ ಮಂತ್ರಘೋಷಗಳೊಂದಿಗೆ ಮಂಗಳ ವಾದ್ಯಗಳ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಗರ್ಭಗುಡಿ ಬಾಗಿಲು ತೆರೆಯಲಾಯಿತು.
Updated on: Oct 25, 2024 | 6:52 AM

ಗರ್ಭಗುಡಿ ಬಾಗಿಲು ತೆರೆಯುವ ವೇಳೆಯಲ್ಲಿ ತೆನೆ ಇರುವ ಬಾಳೆ ಕಡಿಯುವ ಮೂಲಕ ಗರ್ಭಗುಡಿ ಬಾಗಿಲು ತೆರೆಯುವ ಸೂಚನೆ ಸಿಗುತ್ತಲೇ ಬಾಗಿಲು ತೆರೆದ ಅರ್ಚಕರು ಗರ್ಭಗುಡಿಯೊಳಗೆ ಕಳೆದ ವರ್ಷ ಹಚ್ಚಿಟ್ಟ ದೀಪ ಬೆಳಗುತ್ತಿರುವುದು ಹಾಗೂ ಬಾಡದ ಹೂವನ್ನು ದರ್ಶನ ಮಾಡಿದರು. ನೆರೆದಿದ್ದ ಗಣ್ಯರು, ಸಹಸ್ರ ಸಹಸ್ರ ಭಕ್ತರು ದೇವಿಯ ವಿಶ್ವರೂಪ ದರ್ಶನ ಮಾಡುವ ಮೂಲಕ ಪುನೀತರಾಗಿದ್ದು, 11 ದಿನಗಳು ನಡೆಯುವ ಸಂಭ್ರಮದ ಹಾಸನಾಂಬೆ ಉತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾಗಲಿದ್ದಾರೆ.

ಗರ್ಭಗುಡಿ ಬಾಗಿಲನ್ನು ತೆರೆಯುತ್ತಿದ್ದಂತೆಯೇ ಭಕ್ತರು ಹಾಗೂ ಸಾರ್ವಜನಿಕರು, ಹಾಸನಾಂಬೆಗೆ ಉಘೇ ಉಘೇ ಎಂದು ಘೋಷಣೆ ಕೂಗಿ ಭಕ್ತಿಭಾವ ಮೆರೆದರು. ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿ ತಂದು ಗರ್ಭಗುಡಿ ಬಾಗಿಲ ಎದುರು ವಿಶೇಷ ಪೂಜೆ ನೆರವೇರಿಸಿದ ಅರ್ಚಕ ವೃಂದ, ನಂತರ ನಿಗದಿತ ಮುಹೂರ್ತದ ಸಮಯದಲ್ಲಿ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ನೀಡಿದರು. ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇಲ್ಲ ಎಂದು ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ಹೇಳಿತ್ತಾದರೂ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮೂಹ ದೇವಾಲಯ ಆವರಣಕ್ಕೆ ಬಂದಿತ್ತು. ನೂಕು ನುಗ್ಗಲಿನ ನಡುವೆಯೇ ದೇವಿ ದರ್ಶನಕ್ಕೆ ಲಭಿಸಿದ ಅವಕಾಶವನ್ನ ಬಳಸಿಕೊಂಡ ಸಹಸ್ರಾರು ಜನರು ಮೊದಲ ದಿನವೇ ಆರದ ದೀಪ ನೋಡಿ ಪುನೀತರಾದರು.

ಬಾಗಿಲು ತೆರೆಯುವ ವೇಳೆ ಹಾಜರಿದ್ದು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ, ಕಳೆದ ವರ್ಷ 14 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಮಾಡಿದ್ದರು. ಈ ವರ್ಷ 20 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ, ಅವರಿಗೆಲ್ಲ ಯಾವುದೇ ತೊಂದರೆ ಆಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದಿನ ಎಲ್ಲಾ ವರ್ಷಗಳಿಗಿಂತ ಅದ್ದೂರಿ, ಅತ್ಯಾಧುನಿಕ, ಹೈಟೆಕ್ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಅದ್ದೂರಿ ತಯಾರಿಯ ಜೊತೆಗೆ, ಎಲ್ಲೆಡೆ ಬ್ಯಾರಿಕೇಡ್ ವ್ಯವಸ್ಥೆ, ಪೊಲೀಸ್ ಭದ್ರತೆ ನಡುವೆ ಹಾಸನಾಂಬೆ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಹಾಸನಾಂಬೆಯ ದರ್ಶನ ಆರಂಭದ ಹಿನ್ನೆಲೆಯಲ್ಲಿ ಇಡೀ ದೇಗುಲವನ್ನ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಈ ವರ್ಷ ಮೈಸೂರು ದಸರಾ ಮಾದರಿಯ ಲೈಟಿಂಗ್, ಲಾಲ್ ಬಾಗ್ ಮಾದರಿಯ ಫಲಪುಷ್ಪ ಪ್ರದರ್ಶನ, ಲೈಟಿಂಗ ವೀಕ್ಷಣೆಗೆ ಅಂಬಾರಿ ಹೆಸರಿನ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ , ಹಾಸನದ ಐತಿಹಾಸಿಕ ತಾಣ ನೋಡಲು ಪ್ಯಾಕೇಜ್ ಟೂರ್ ಹೀಗೆ ಹಲವು ವೈಶಿಷ್ಟ್ಯದ ಜೊತೆಗೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಂತಹ ವಿಶೇಷ ಕಾಅರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಒಟ್ಟಿನಲ್ಲಿ ಸಂಭ್ರಮ ಸಡಗರದ ನಡುವೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಚಾಲನೆ ಸಿಕ್ಕಿದೆ. ಬೇಡಿದ ವರವ ಕುರುಣಿಸುವ ಶಕ್ತಿದೇವತೆಯನ್ನು ಕಣ್ತುಂಬಿಕೊಳ್ಳುವ ಕಾತರತೆಯಿಂದ ಇಂದಿನಿಂದ ಲಕ್ಷ ಲಕ್ಷ ಭಕ್ತರು ಆಗಮಿಸಲಿದ್ದು, ದೇವಿ ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಕೂಡ ಸನ್ನದ್ಧವಾಗಿದೆ.














