Updated on: May 17, 2023 | 8:22 PM
ಕೊಡಗು ಜಿಲ್ಲೆಯ ನಾಪೊಕ್ಲು ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ತೀವ್ರವಾದ ಗಾಳಿಯೊಂದಿಗೆ ಕೆಲ ಕಾಲ ಮಳೆ ಸುರಿದಿದ್ದು, ಅನೇಕ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ನಾಪೋಕ್ಲು ನಾಡ ಕಚೇರಿ ಬಳಿ ಬೃಹತ್ ಮರ ರಸ್ತೆಗುರುಳಿದೆ. ಪರಿಣಾಮವಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ನಾಪೋಕ್ಲು ಪೊಲೀಸ್ ಠಾಣೆ ಬಳಿಯಲ್ಲೂ ತೆಂಗಿನಮರ ರಸ್ತೆಗುರುಳಿದೆ. ಇದರಿಂದಾಗಿ ಸಂಚಾರಕ್ಕೆ ಅಡಚಣೆಯಾಗಿ ಪ್ರಯಾಣಿಕರು ಪರದಾಡುವಂತಾಯಿತು. ಮಳೆಯಿಂದಾಗಿ ಮರ ತೆರವುಗೊಳಿಸಲು ಹರಸಾಹಸಪಡಬೇಕಾಯಿತು.
ಭಾರೀ ಮಳೆ, ಗಾಳಿಯಿಂದಾಗಿ ನಾಪೋಕ್ಲು ಭಾಗಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯವಸ್ತಗೊಂಡಿದೆ.
ರಾಜ್ಯದಲ್ಲಿ ಹಲವೆಡೆ ಕಳೆದ ವಾರ ಸುರಿದಿದ್ದ ಮಳೆ ನಂತರ ತುಸು ಬಿಡುವು ಪಡೆದಿತ್ತು. ಸೋಮವಾರ ಹಾಗೂ ಮಂಗಳವಾರ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಮಳೆಯಾಗಿತ್ತು.
ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳ ದಕ್ಷಿಣ ಒಳನಾಡಿನಲ್ಲಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.