- Kannada News Photo gallery Hubballi-Dharwad Residents Fix Roads with Own Money as Urban Areas Face Neglect
ಕುಗ್ರಾಮಗಳಿಗಿಂತ ಕಡೆಯಾದ ಹುಬ್ಬಳ್ಳಿ-ಧಾರವಾಡದ ಬಡಾವಣೆಗಳ ಸ್ಥಿತಿ: ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿಸುತ್ತಿರುವ ಜನ
ಹುಬ್ಬಳ್ಳಿ, ಜುಲೈ 10: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಖ್ಯಾತಿ ಪಡೆದಿದೆ. ಆದರೆ, ಇದೇ ಪಾಲಿಕೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಜನರು ಪಾಲಿಕೆಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಡಾವಣೆಗಳಾಗಿ ಇಪ್ಪತ್ತು ವರ್ಷಗಳಾದರೂ ಬುಟ್ಟಿ ಮಣ್ಣು ಕೂಡಾ ಹಾಕದೇ ಇರುವುದರಿಂದ, ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಮಾಡಿಸದೇ ಇದ್ದಿದ್ದಕ್ಕೆ ಇದೀಗ ಜನರೇ ಸ್ವಂತ ಹಣ ಹಾಕಿ ರಸ್ತೆ ಮಾಡಿಸಿಕೊಳ್ಳುತ್ತಿದ್ದಾರೆ.
Updated on: Jul 10, 2025 | 2:25 PM

ಕುಗ್ರಾಮಗಳಿಗಿಂತ ಕಡೆಯಾದ ಹುಬ್ಬಳ್ಳಿ-ಧಾರವಾಡದ ಅನೇಕ ಬಡಾವಣೆಗಳ ಸ್ಥಿತಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆ ಎಂಬ ಖ್ಯಾತಿಯೇನೋ ಪಡೆದಿದೆ. ಆದರೆ ಇದೇ ಪಾಲಿಕೆ, ತನ್ನ ಕೆಲಸಗಳಿಂದ ಮಾತ್ರ ಖ್ಯಾತಿ ಪಡೆಯದೇ, ಬರಿ ಭ್ರಷ್ಟಾಚಾರ, ಹಗರಣಗಳಿಂದ ಮಾತ್ರ ಸುದ್ದಿಯಾಗುತ್ತಿದೆ. ಹೀಗಾಗಿ ಅವಳಿ ನಗರದ ಜನರು ಪಡಬಾರದ ಕಷ್ಟ ಪಡುವಂತಾಗಿದೆ. ಹುಬ್ಬಳ್ಳಿ ವಾಣಿಜ್ಯ ನಗರವಾದ್ರೆ, ಧಾರವಾಡ ಶಿಕ್ಷಣ ನಗರವಾಗಿದೆ. ಹೀಗಾಗಿ ಎರಡು ನಗರಗಳು ವೇಗವಾಗಿ ಬೆಳೆಯುತ್ತಿವೆ. ಆದರೆ ಇದೇ ಅವಳಿ ನಗರಗಳಲ್ಲಿ ಅನೇಕ ಬಡವಾಣೆಗಳ ಜನರು ಪಡುತ್ತಿರುವ ಕಷ್ಟಗಳು ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಒಂದಡೆ ಪ್ರಮುಖ ರಸ್ತೆಗಳು ಗುಂಡಿಮಯವಾಗಿದ್ದರೆ, ಬಡಾವಣೆ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಹುಬ್ಬಳ್ಳಿ ನಗರದ ಕುಮಾರಪಾರ್ಕ್, ಸನ್ ಸಿಟ್ ಗಾರ್ಡನ್, ಮನೋಜ್ ಪಾರ್ಕ್ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆಗಳ ಕೆಸರು ಗದ್ದೆಯಾಗಿವೆ. ಸ್ವಲ್ಪ ಮಳೆಯಾದರೆ ಸಾಕು, ರಸ್ತೆಗಳು ನೀರು ಮತ್ತು ಕೆಸರುಮಯವಾಗುತ್ತವೆ. ಇಂತಹ ರಸ್ತೆಯಲ್ಲಿ ಓಡಾಡುವುದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಕೆಸರುಮಯ ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುತ್ತಿರುವ ಜನ: ಪ್ರತಿನಿತ್ಯ ಮಕ್ಕಳನ್ನು ಶಾಲೆಗೆ ಬಿಡಲು ಪಾಲಕರು ಹೆದರುತ್ತಿದ್ದರೆ, ವೃದ್ದರು ಮನೆಯಿಂದ ಹೊರಗೆ ಬರಲು ಕೂಡಾ ಭಯ ಪಡುತ್ತಿದ್ದಾರೆ. ಈಗಾಗಲೇ ಕೆಸರುಮಯ ರಸ್ತೆಯಲ್ಲಿ ಬಿದ್ದು ಅನೇಕರು ಗಾಯಗೊಂಡಿದ್ದಾರೆ. ದ್ವಿಚಕ್ರವಾಹನಗಳಲ್ಲಿ ಹೋಗುವಾಗ, ಬೈಕ್ ಸ್ಕಿಡ್ ಆಗಿ ಬಿದ್ದು ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರ ನಮ್ಮ ಗೋಳನ್ನು ಯಾರೂ ಕೇಳುತ್ತಿಲ್ಲ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿಯ ಬಹುತೇಕ ಬಡಾವಣೆಗಳಾಗಿ ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳಾಗಿವೆ. ಆದರೆ ಬಹುತೇಕ ಕಡೆ ಈವರಗೆ ಒಮ್ಮೆಯೂ ಪಾಲಿಕೆಯಿಂದ ರಸ್ತೆಗಳಿಗೆ ಡಾಂಬರು ಹಾಕುವ ಕೆಲಸವಾಗಿಲ್ಲ. ನಿರಂತರ ನೀರು ಪೂರೈಕೆ ಯೋಜನೆ, ಗ್ಯಾಸ್ ಲೈನ್ ಸೇರಿದಂತೆ ಅನೇಕ ಯೋಜನೆಗಳಿಗೆ ನೆಲವನ್ನು ಅಗಿದಿರುವುದರಿಂದ, ರಸ್ತೆಗಳು ಕೆಸರು ಮಯವಾಗಿವೆ. ಹೀಗಾಗಿ ಬಡವಾಣೆ ನಿವಾಸಿಗಳು ರಸ್ತೆ ರಿಪೇರಿ ಮಾಡಿಸಿ ಎಂದು ಪಾಲಿಕೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದಾರಂತೆ. ಆದರೆ ಅನುದನ ಇಲ್ಲ ಎಂಬ ಕಾರಣ ಕೊಟ್ಟು ಪಾಲಿಕೆಯ ಅಧಿಕಾರಿಗಳು, ಪಾಲಿಕೆ ಸದಸ್ಯರು ನುಣುಚಿಕೊಳ್ಳುತ್ತಿದ್ದಾರಂತೆ.

ಸ್ವಂತ ಹಣ ಹಾಕಿ ರಸ್ತೆ ಮಾಡಿಸಿಕೊಳ್ಳತ್ತಿರುವ ಜನ: ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಪಾಲಿಕೆ ಕೆಲಸ. ಆದರೆ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜವಾಬ್ದಾರಿಯನ್ನೇ ಮರೆತಿದ್ದಾರೆ. ಹೀಗಾಗಿ ಪಾಲಿಕೆ ಮಾಡಬೇಕಾದ ಕೆಲಸವನ್ನು ಇದೀಗ ಸ್ಥಳೀಯ ನಿವಾಸಿಗಳೇ ಮಾಡುತ್ತಿದ್ದಾರೆ. ಕುಮಾರಪಾರ್ಕ್ ನಿವಾಸಿಗಳು, ತಾವೇ ಮನೆಮನೆಗೆ ಹೋಗಿ ಪಟ್ಟಿಯನ್ನು ಹಾಕಿ, ರಸ್ತೆ ರಿಪೇರಿ ಮಾಡಿಸಿಕೊಳ್ಳುತ್ತಿದ್ದಾರೆ. ಅನೇಕ ಕಡೆ ಕಲ್ಲು, ಸಿಮೆಂಟ್ ಹಾಕಿಸಿ ರಸ್ತೆ ದುರಸ್ಥಿ ಮಾಡಿಸಿಕೊಳ್ಳುತ್ತಿದ್ದಾರೆ.

ಸನ್ಸಿಟಿ ಗಾರ್ಡನ್ನಲ್ಲಿ ಕೂಡಾ ನಿವಾಸಿಗಳು ಪ್ರತಿ ಮನೆಗೆ ಐದು ಸಾವಿರ ರೂ.ನಂತೆ ಹಣ ಸಂಗ್ರಹಿಸಿ, ರಸ್ತೆಗೆ ಮೊರಂ ಹಾಕಿಸಿದ್ದಾರೆ. ಪ್ರತಿವರ್ಷ ತೆರಿಗೆ ಪಡೆಯುವ ಪಾಲಿಕೆ, ಅಭಿವೃದ್ದಿ ಕೆಲಸಗಳನ್ನು ಮಾತ್ರ ಮಾಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ನ್ಯಾಯಯುತವಾಗಿ ಪಾಲಿಕೆಗೆ ತೆರಿಗೆ ಪಾವತಿಸುವ ಜನರ ಬಡಾವಣೆಗಳಿಗೆ, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕಿದೆ.



