- Kannada News Photo gallery Jayalalitha Assets transferred to tamil nadu here Is Photos of her 27 Kgs Gold, 601 Kgs Silver And others jewellery
ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳನ್ನ ನೋಡಿ
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಕೇಸ್ ವಿಚಾರಣೆ ಬೆಂಗಳೂರಿನಲ್ಲಿ ನಡೆದಿತ್ತು. ಜಯಲಿಲಿತಾರಿಗೆ ಸೇರಿದ ಸೊಂಟದ ಚಿನ್ನದ ಡಾಬು, ಕಿರೀಟ, ಒಡವೆಗಳು ಸೇರಿದಂತೆ ದಶಕಗಳಿಂದ ಬೆಂಗಳೂರಿನ ಕೋರ್ಟ್ ವಶದಲ್ಲಿದ್ದ 1606 ಬಗೆಯ ವಸ್ತುಗಳನ್ನು ಇಂದು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಇದಲ್ಲದೇ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳು ತಮಿಳುನಾಡಿನ ಪಾಲಾಗಿದ್ದು ಈ ಆಸ್ತಿಗಳ ವಿವರ ಇಲ್ಲಿದೆ.
Updated on: Feb 15, 2025 | 6:33 PM

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅಪರಾಧಿ ಎಂದು ಬೆಂಗಳೂರಿನ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಅಂತಿಮವಾಗಿ ಸುಪ್ರೀಂಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಇದೀಗ ಬೆಂಗಳೂರಿನ ವಿಶೇಷ ಕೋರ್ಟ್ ನ ವಶದಲ್ಲಿದ್ದ ಜಯಲಲಿತಾರ ಬೆಲೆಬಾಳುವ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ.

ಜಯಲಲಿತಾರಿಗೆ ಸೇರಿದ ಸೊಂಟದ ಚಿನ್ನದ ಡಾಬು, ಚಿನ್ನದ ಕಿರೀಟ, ವಾಚುಗಳು, ಚಿನ್ನದ ಕತ್ತಿ ಸೇರಿದಂತೆ ಹಲವು ವಸ್ತುಗಳನ್ನು ತಮಿಳುನಾಡು ವಶಕ್ಕೆ ನೀಡಿ ವಿಶೇಷ ಕೋರ್ಟ್ ನ್ಯಾಯಾಧೀಶ ಹೆಚ್.ಎ.ಮೋಹನ್ ಇಂದು ಆದೇಶ ಹೊರಡಿಸಿದ್ದಾರೆ.

ಇದಲ್ಲದೇ ಸಾವಿರಾರು ಕೋಟಿ ಮೌಲ್ಯದ ಸ್ಥಿರಾಸ್ತಿಗಳ ಹರಾಜು ಮಾಡಬೇಕು ಅಥವಾ ಸಾರ್ವಜನಿಕರಿಗಾಗಿ ಬಳಸಬೇಕೆಂದು ಕೋರ್ಟ್ ಆದೇಶಿಸಿದ್ದು, ಇಂದು (ಫೆಬ್ರವರಿ 15) ತಮಿಳುನಾಡಿನಿಂದ ಅಗಮಿಸಿದ್ದ ಗೃಹ ಇಲಾಖೆ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಜಯಲಲಿತಾರ ಒಡವೆ ವಸ್ತುಗಳನ್ನು ತಮಿಳುನಾಡಿಗೆ ಸಾಗಿಸಿದರು.

ಇನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಗೊಂಡ ವಸ್ತುಗಳ ವಿವರ ನೀಡೋದಾದರೆ, 27 ಕೆಜಿ ತೂಕವುಳ್ಳ 1606 ಬಗೆಯ ಚಿನ್ನ, ವಜ್ರಾಭರಣಗಳು, 2,20,384 ರೂಪಾಯಿಯ ಹಳೆಯ ನೋಟುಗಳು, 10.18 ಕೋಟಿ ಮೊತ್ತದ ಬ್ಯಾಂಕ್ ನ ನಿಶ್ಚಿತ ಠೇವಣಿಗಳು, ತಮಿಳುನಾಡು ಪೊಲೀಸರ ವಶದಲ್ಲಿರುವ ಜಯಲಲಿತಾರು ಬಳಸುತ್ತಿದ್ದ ಐಷಾರಾಮಿ ಬಸ್ ಹರಾಜಿಗೆ ಸೂಚನೆ ನೀಡಲಾಗಿದೆ

ತಮಿಳುನಾಡಿನ ಚೆನ್ನೈ, ತಂಜಾವೂರು, ಚೆಂಗಲಪಟ್ಟು, ಕಾಂಚಿಪುರಂ, ತಿರುವಳ್ಳೂರ್, ತಿರುವರೂರ್, ತೂತುಕುಡಿಯಲ್ಲಿನ 1526 ಎಕರೆ ಜಮೀನು ಹರಾಜಿನ ಬದಲು ಸಾರ್ವಜನಿಕ ಬಳಕೆಗೆ ಮೀಸಲಿಡಲು ಕೋರ್ಟ್ ಸಲಹೆ ನೀಡಿದೆ.

ಒಂದೋ ಬಡವರಿಗೆ ಲೇಔಟ್ ಮಾಡಿ ನಿವೇಶನ ಹಂಚಿ ಅಥವಾ ಸಾರ್ವಜನಿಕ ಹರಾಜಿನಲ್ಲಿ ಮಾರಾಟ ಮಾಡಿ ಜನರ ಒಳಿತಿಗೆ ಬಳಸಲು ಸಲಹೆ ನೀಡಲಾಗಿದೆ. ಚಿನ್ನಾಭರಣಗಳನ್ನು ಆರ್‌ಬಿಐಗೆ ಮಾರಾಟ ಮಾಡಿ ಹಣ ಜನರಿಗಾಗಿ ಬಳಸಲು ಸೂಚನೆ ನೀಡಲಾಗಿದೆ.

ಹರಾಜಿನಿಂದ ಬಂದ ಹಣವನ್ನು ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಬಳಸಲು ಸೂಚನೆ, ಹೀಗೆ ಮಾಡಿದರೆ ಸಂವಿಧಾನ ರಚಿಸಿದವರ ಆಶಯ ಈಡೇರುತ್ತದೆ, ಅಧಿಕಾರದಲ್ಲಿರುವವರಿಗೂ ಇಂತಹ ಕೃತ್ಯ ಮಾಡದಂತೆ ನೀಡುವ ಸಂದೇಶವಾಗಲಿದೆ ಎಂದು ನ್ಯಾಯಾಧೀಶ ಹೆಚ್.ಎ.ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಶಶಿಕಲಾ ಸೇರಿದಂತೆ ಅಪರಾಧಿಗಳಿಂದ 20 ಕೋಟಿ ರೂ. ದಂಡ ಪಾವತಿಯಾಗಿದ್ದು ಇದರಲ್ಲಿ ವ್ಯಾಜ್ಯ ಶುಲ್ಕವಾಗಿ ಒಟ್ಟು 13 ಕೋಟಿ ಹಣ ಕರ್ನಾಟಕ ಸರ್ಕಾರಕ್ಕೆ ಪಾವತಿಸಲಾಗಿದೆ. ಅಪರಾಧಿಗಳಿಂದ ಸಂಗ್ರಹಿಸಿದ ದಂಡದ ಮೊತ್ತದಲ್ಲಿ ವ್ಯಾಜ್ಯ ಶುಲ್ಕ ಪಾವತಿ ಮಾಡಿ ಉಳಿದ 7 ಕೋಟಿ ರೂಪಾಯಿ ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಹಸ್ತಾಂತರ ಮಾಡಿದೆ.

ಹೀಗೆ ಸುಮಾರು 30 ವರ್ಷಗಳ ಬಳಿಕ ಸಾವಿರಾರು ಕೋಟಿ ಮೊತ್ತದ ಜಮೀನು, ಒಡವೆ ವಸ್ತು ತಮಿಳುನಾಡು ಸರ್ಕಾರದ ಕೈಸೇರಿದೆ. ವಿಶೇಷ ಕೋರ್ಟ್ ಜಡ್ಜ್ ಹೆಚ್.ಎ ಮೋಹನ್ ಆದೇಶ ಹೊರಡಿಸಿದ್ದಾರೆ. ಈ ಆಸ್ತಿಯನ್ನು ಹರಾಜು ಮಾಡಬೇಕು ಅಥವಾ ಸಾರ್ವಜನಿಕರಿಗಾಗಿ ಸದ್ಬಳಕೆ ಮಾಡುವಂತೆ ಕೋರ್ಟ್ ಸೂಚಿಸಿದೆ. ಹೀಗಾಗಿ ಜಯಲಲಿತಾರ ಈ ಆಸ್ತಿಗಳೀಗ ತಮಿಳುನಾಡಿನ ಸಾರ್ವಜನಿಕರ ಆಸ್ತಿಯಾಗುವುದು ನಿಶ್ಚಿತ.



















