- Kannada News Photo gallery Kodagu: Dubare Elephant Camp in Kodagu: Kaveri River's Low Water Levels Impact Tourism, taja suddi
ಬತ್ತಿ ಬರಡಾಗುತ್ತಿರುವ ಕಾವೇರಿ: ದಡ ಸೇರಿದ ಬೋಟ್ಗಳು, ಬಂಡೆಗಳ ಮೇಲೆ ಹೆಜ್ಜೆ ಹಾಕಿದ ಪ್ರವಾಸಿಗರು
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದು, ಮೋಟಾರ್ ಬೋಟ್ ಮತ್ತು ರಾಫ್ಟಿಂಗ್ ಸೇವೆಗಳು ಸ್ಥಗಿತಗೊಂಡಿವೆ. ಹೀಗಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಅಪಾಯಕಾರಿಯಾಗಿ ನದಿಯನ್ನು ದಾಟುವಂತಹ ಪರಿಸ್ಥಿತಿ ಬಂದಿದೆ. ನದಿ ಬತ್ತಿರುವುದಕ್ಕೆ ಅಂತರ್ಜಲ ಕುಸಿತ ಕಾರಣ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
Updated on: Mar 05, 2025 | 6:00 PM

ಜೀವನದಿ ಕಾವೇರಿ. ಕೊಡಗು ಮೈಸೂರು ಮಂಡ್ಯ ಸೇರಿದಂತೆ ತಮಿಳುನಾಡಿನ ಬಹಳಷ್ಟು ಜಿಲ್ಲೆಗಳಿಗೆ ಅಕ್ಷರಶಃ ಜೀವನದಿಯಾಗಿದೆ. ಆದರೆ ಈ ಬಾರಿ ಅವಧಿಗೆ ಮೊದಲೇ ಕಾವೇರಿ ನದಿ ಬತ್ತಲಾರಂಭಿಸಿದೆ. ಜೀವನದಿಯ ಒಡಲು ಬರಿದಾಗುತ್ತಿದೆ. ಹಾಗಾಗಿ ದುಬಾರೆ ಪ್ರವಾಸಿ ತಾಣದಲ್ಲಿ ಮಷೀನ್ ಬೋಟ್ಗಳು ಹಾಗೂ ರಾಫ್ಟಿಂಗ್ ಬೋಟ್ಗಳು ದಡ ಸೇರಿವೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದಲ್ಲಿರುವ ವಿಶ್ವ ಪ್ರಸಿದ್ಧ ದುಬಾರೆ ಪ್ರವಾಸಿ ತಾಣಕ್ಕೆ ಪ್ರತನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಬೇರೆ ದಿನಗಳಲ್ಲಿ ಮೋಟಾರ್ ಬೋಟ್ ಮೂಲಕ ಪ್ರವಾಸಿಗರನ್ನ ಇಲ್ಲಿಂದ ಆನೆ ಶಿಬಿರಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಮಳೆ ಇಲ್ಲದೆ ಕಾವೇರಿಯಲ್ಲಿ ನೀರು ಕಡಿಮೆಯಾಗಿದೆ. ಹಾಗಾಗಿ ಮೋಟಾರ್ ಬೋಟ್ ಓಡಿಸಲಾಗುತ್ತಿಲ್ಲ.

ಈ ಕಾರಣದಿಂದಾಗಿ ಅರಣ್ಯ ಇಲಾಖೆ ಬೋಟ್ ಸಂಚಾರ ನಿಲ್ಲಿಸಿದೆ. ಜೊತೆಗೆ ಖಾಸಗಿ ರಾಫ್ಟಿಂಗ್ ಬೋಟ್ಗಳು ಕೂಡ ನೀರಲ್ಲದೆ ಸಂಚಾರ ನಿಲ್ಲಿಸಿವೆ. ಈ ಕಾರಣದಿಂದಾಗಿ ಪ್ರವಾಸಿಗರು ಅನಿವಾರ್ಯವಾಗಿ ಅಪಾಯಕಾರಿ ನದಿಯನ್ನ ದಾಟಿಯೇ ದುಬಾರೆಗೆ ತೆರಳುತ್ತಿದ್ದಾರೆ. ಒಂದು ರೀತಿಯಲ್ಲಿ ನೀರಲ್ಲಿ ಆಡುತ್ತಾ ಮಜಾ ಮಾಡುತ್ತಾ ನದಿ ದಾಟುವುದು ಪ್ರವಾಸಿಗರಿಗೂ ಖುಷಿ ನೀಡುತ್ತಿದೆ.

ಪ್ರವಾಸಿಗರು ತಮ್ಮ ವೃದ್ಧ ತಂದೆ ತಾಯಿ, ಪುಟ್ಟ ಪುಟ್ಟ ಮಕ್ಕಳು ಎಲ್ಲರನ್ನ ಕರೆದುಕೊಂಡು ಆನೆ ಶಿಬಿರ ನೋಡಲು ನದಿ ದಾಟುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ನದಿ ದಾಟುವ ಯತ್ನದಲ್ಲಿ ಹಲವು ಮಂದಿ ತಮ್ಮ ಬೆಲೆ ಬಾಳುವ ಮೊಬೈಲ್ಗಳನ್ನ ಕಳೆದುಕೊಂಡಿದ್ದಾರಂತೆ. ಕಾವೇರಿ ನದಿ ಅವಧಿಗೆ ಮೊದಲೇ ಬತ್ತುತ್ತಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಉತ್ತಮ ಮಳೆಯಾಗಿದೆ. ಆದರೂ ಈ ವರ್ಷ ಕಾವೇರಿಯಲ್ಲಿ ನೀರಿಲ್ಲ ಯಾಕೆ ಅನ್ನೋದು ಹಲವರ ಪ್ರಶ್ನೆ. ಇದಕ್ಕೆ ಅಂತರ್ಜಲ ಕುಸಿತ ಆಗಿರೋದೇ ಕಾರಣ ಎಂಬ ಅಭಿಪ್ರಾಯವೂ ಇದೆ. ನದಿ ಪಾತ್ರದಲ್ಲಿ ಗಣನೀಯವಾಗಿ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ನಿಂತು ಹೋಗಿದೆ. ಹಾಗಾಗಿ ನೀರಿಂಗದೆ ಭೂಮಿಯ ಒಡಲು ಬರಿದಾಗಿದೆ.

ಕಾವೇರಿ ನದಿಗೆ ಅಡ್ಡಲಾಗಿ ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡಬೇಕೆಂಬ ಆಗ್ರಹವು ಕೇಳಿ ಬಂದಿದೆ. ಈ ಸಂಬಂಧ ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ. ಆದರೆ ಅರಣ್ಯ ಇಲಾಖೆಯಿಂದ ಸೂಕ್ತ ಸಹಕಾರ ಸಿಗ್ತಿಲ್ಲ ಅನ್ನೋ ಆರೋಪ ನಾಗರಿಕರಲ್ಲಿ ಕೇಳಿ ಬಂದಿದೆ.
























