ಕಲಿಯುಗದ ಕಾಮದೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಪ್ರಭುಗಳ 353ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ರಾಯರ ದರ್ಶನ ಮತ್ತು ಆರಾಧನೆ ವೀಕ್ಷಣೆಗೆ ರಾಜ್ಯ, ಅಂತರಾಜ್ಯದಿಂದ ಭಕ್ತರು ಆಗಮಿಸುತ್ತಿದ್ದಾರೆ. ರವಿವಾರದಿಂದ ರಾಯರ ಆರಾಧನೆ ಆರಂಭವಾಗಿದ್ದು, ಕಳೆದ ಎರಡು ದಿನಗಳ ಆರಾಧನೆಯ ಫೋಟೋಸ್ ಇಲ್ಲಿವೆ.
ಆರಾಧನೆಯ ಮೊದಲ ದಿನದಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ ಇಒ ಜೆ.ಶ್ಯಾಮಲಾ ರಾವ್ ಅವರು ಟಿಟಿಡಿಯಿಂದ ಶ್ರೀವಾರಿ ವಸ್ತ್ರವನ್ನು ಮಂತ್ರಾಲಯಕ್ಕೆ ತಂದರು. ಶ್ರೀಮಠದ ಅಧಿಕಾರಿಗಳು ಮತ್ತು ಪಂಡಿತರು ಅವರನ್ನು ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.
ಜೆ.ಶ್ಯಾಮಲಾ ರಾವ್ ಅವರು ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಶ್ರೀವಾರಿ ವಸ್ತ್ರವನ್ನು ಅಪರ್ಪಿಸಿದರು. ಟಿಟಿಡಿ ಅಧಿಕಾರಿಗಳು ಶ್ರೀ ಸುಬುಧೇಂದ್ರ ತೀರ್ಥರಿಗೆ ಶ್ರೀವಾರಿ ಶೇಷವಸ್ತ್ರ ಮತ್ತು ತಿರುಪತಿ ಪ್ರಸಾದ ನೀಡಿ ಗೌರವಿಸಿದರು.
ದ್ವಜಾರೋಹಣ, ಗೋಪೂಜೆ, ಅಶ್ವಪೂಜೆಯೊಂದಿಗೆ ಆರಾಧನಾ ಉತ್ಸವವನ್ನು ಶ್ರೀ ಸುಬುಧೇಂದ್ರ ತೀರ್ಥರು ಉದ್ಘಾಟಿಸಿದರು.
ಯೋಗೀಂದ್ರ ಸಭಾ ಮಂಟಪದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ದೀಪಪ್ರಜ್ವಲನೆ ನೆರವೇರಿಸಿ ಶ್ರೀಮಠದ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ಭಕ್ತರಿಗೆ ಆಶೀರ್ವದಿಸಿದರು. ಬಳಿಕ ಉಂಜಾಳ ಮಂಟಪದಲ್ಲಿ ಧಾನ್ಯ ಪೂಜೆ ನಡೆಯಿತು.
ಆರಾಧನೆಯ ಎರಡನೇ ದಿನದಂದು ಮದ್ವಮಾರ್ಗದ ವಿಸ್ತೃತ ಕಾರಿಡಾರ್ ಅನ್ನು ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ನಂತರ ಶ್ರೀ ಹಂಸವಾಹನ ಪ್ರಹಲ್ಲಾದರಾಜರಿಗೆ ಸ್ವಾಮೀಜಿಯವರು ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ತಾಳ, ವಾದ್ಯ ಸಂಗೀತ ನಾದಲಹರಿ ಸಂಗೀತ ವಾದ್ಯವೃಂದ, ಮೈಸೂರು, ವಿದ್ವಾನ್ ಪುತ್ತೂರು ನರಸಿಂಹ ನಾಯ್ಕ್ ಅವರಿಂದ ದಾಸವಾಣಿ, ಬೆಂಗಳೂರು. ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಭರತನಾಟ್ಯದಂತ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
Published On - 12:58 pm, Tue, 20 August 24