ಬೆಳ್ಳಿ ಪದಕ ಗೆದ್ದ ನೀರಜ್ಗೆ 4 ಕೋಟಿ ರೂ: ಕಂಚಿನ ಪದಕ ಗೆದ್ದ ಮನು ಭಾಕರ್ಗೆ 5 ಕೋಟಿ ರೂ. ಬಹುಮಾನ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪರ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಹರಿಯಾಣ ಸರ್ಕಾರ ಘೋಷಿಸಿದ ಬಹುಮಾನ ಮೊತ್ತದಲ್ಲಿ ಮನು ಭಾಕರ್ ಅವರಿಗೆ 5 ಕೋಟಿ ರೂ. ನೀಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಅವರ ಸಾಧನೆ. ಏಕೆಂದರೆ ಮನು ಭಾಕರ್ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದಿರುವ ಕಾರಣ ಅವರಿಗೆ ಹೆಚ್ಚಿನ ಮೊತ್ತ ನೀಡಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ.
Updated on: Aug 19, 2024 | 1:23 PM

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಹರಿಯಾಣ ಸರ್ಕಾರ ಬಹುಮಾನ ಮೊತ್ತ ಘೋಷಿಸಿದೆ. ಈ ಬಹುಮಾನ ಮೊತ್ತದಲ್ಲಿ ಯಂಗ್ ಶೂಟರ್ ಮನು ಭಾಕರ್ 5 ಕೋಟಿ ರೂ. ಪಡೆದರೆ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ 4 ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ.

ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 2 ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸಿಂಗಲ್ಸ್ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಭಾರತದ ಪರ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿರುವ ಕಾರಣ ಮನು ಭಾಕರ್ಗೆ 5 ಕೋಟಿ ರೂ. ನೀಡಲಾಗಿದೆ.

ಇನ್ನು ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರಿಗೆ 4 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು. ಈ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದರು.

ಇನ್ನು ಮನು ಭಾಕರ್ ಅವರ ಜೊತೆಗೂಡಿ ಏರ್ ಪಿಸ್ತೂಲ್ ಮಿಶ್ರ ಶೂಟಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ 2.5 ಕೋಟಿ ಬಹುಮಾನ ನೀಡಿದೆ.

ಹಾಗೆಯೇ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರಿಗೂ 2.50 ಕೋಟಿ ರೂ. ಬಹುಮಾನ ನೀಡಲಾಗಿದೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಿಂಚಿರುವ ರಾಜ್ಯದ ಆಟಗಾರರಿಗೆ ಹರಿಯಾಣ ಸರ್ಕಾರ ಕೋಟಿ ಮೊತ್ತವನ್ನು ನೀಡಿ ಪ್ರೋತ್ಸಾಹಿಸಿದೆ.



















