
ತೆಲುಗು ಚಿತ್ರರಂಗದ ಖ್ಯಾತ ನಟ ‘ಮೆಗಾ ಸ್ಟಾರ್’ ಚಿರಂಜೀವಿ ಅವರಿಗೆ 2022ನೇ ಸಾಲಿನ ‘ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ’ ಪ್ರಶಸ್ತಿ ಘೋಷಿಸಲಾಗಿದೆ. ಇದು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ನ.20ರಂದು ಗೋವಾದಲ್ಲಿ 53ನೇ ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ ಆರಂಭ ಆಗಿದೆ. ಈ ವೇಳೆ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಅವರು ಚಿರಂಜೀವಿಗೆ ಈ ಪ್ರಶಸ್ತಿ ಘೋಷಿಸಿದರು.

ನಾಲ್ಕು ದಶಕಗಳಿಂದಲೂ ಭಾರತೀಯ ಚಿತ್ರರಂಗಕ್ಕೆ ಚಿರಂಜೀವಿ ಅವರು ಕೊಡುಗೆ ನೀಡುತ್ತಾ ಬಂದಿದ್ದಾರೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ನಟನಾಗಿ, ನಿರ್ಮಾಪಕನಾಗಿ ಚಿರಂಜೀವಿ ಸಕ್ರಿಯರಾಗಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇಂದಿಗೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಪದ್ಮ ಭೂಷಣ, ನಂದಿ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಈಗಾಗಲೇ ಚಿರಂಜೀವಿ ಅವರ ಮುಡಿಗೇರಿವೆ. ಈಗ 2022ನೇ ಸಾಲಿನ ‘ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.