
ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (65) ಇಂದು ಮುಂಜಾನೆ ಬೆಂಗಳೂರಿನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಲವು ನಾಯಕರು ಸುಧಾಕರ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಓರ್ವ ಸ್ನೇಹಿತನಾಗಿ ಮತ್ತು ಸಹೋದ್ಯೋಗಿಯಾಗಿ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಚಿತ್ರದುರ್ಗದ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹಿರಿಯೂರಿನ ನೆಹರು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸಚಿವರದ ಅಕಾಲಿಕ ನಿಧನದ ಹಿನ್ನೆಲೆ ಗೌರವಾರ್ಥವಾಗಿ ಸೋಮವಾರ (ಮೇ 11) ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲ ಶಾಲೆ, ಕಾಲೇಜುಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಈ ಬಗ್ಗೆ ಡಿಸಿ ಟಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಯನ್ನೂ ಆಚರಿಸುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ನಾಳೆ ಸಂಜೆ 4 ಗಂಟೆಗೆ ಡಿ.ಸುಧಾಕರ್ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಸುರ್ಜೇವಾಲ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿರಲಿದ್ದಾರೆ.

ಇನ್ನು ಸುಧಾಕರ್ ಕುಟುಂಬದ ದುಃಖ ಕಟ್ಟೆಯೊಡೆದಿದ್ದರೆ ಅದರ ಜೊತೆ ಜೊತೆಗೆ ಸಚಿವರನ್ನು ನೆನೆದು ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಆಕ್ರಂದನವೂ ಮುಗಿಲು ಮುಟ್ಟಿದೆ. ಕಷ್ಟ ಎಂದು ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ. ಅವರಿಂದ ನಿತ್ಯ ನೂರಾರು ಜನರು ಸಹಾಯ ಪಡೆದುಕೊಳ್ಳುತ್ತಿದ್ದರು. ಮಹಿಳೆಯರ ಪಾಲಿಗೆ ತಂದೆಯಂತಿದ್ದ ಅವರು ಅನೇಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.