- Kannada News Photo gallery Mysuru Dasara 2024 Gajapade Talimu, elephants and horses in Firecrackers training, See photos here
ಮೈಸೂರು ದಸರಾ: ಗಜಪಡೆ, ಅಶ್ವಾರೋಹಿ ಪಡೆಗೆ ಸಿಡಿಮದ್ದು ತಾಲೀಮು, ಹೇಗಿತ್ತು ನೋಡಿ
ಮೈಸೂರು, ಸೆಪ್ಟೆಂಬರ್ 30: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತಾಲೀಮು ಚುರುಕುಗೊಳಿಸಲಾಗಿದೆ. ಭಾನುವಾರ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಎರಡನೇ ಬಾರಿ ಸಿಡಿಮದ್ದು ಸಿಡಿಸಿ ಅಭ್ಯಾಸ ನಡೆಸಲಾಯಿತು. ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಜಂಬೂಸವಾರಿಯಂದು ಸಿಡಿಮದ್ದು ಗದ್ದಲಕ್ಕೆ ವಿಚಲಿತಗೊಂಡು ರಂಪಾಟ ಮಾಡುವುದನ್ನು ತಡೆಯಲು ಹೀಗೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ.
Updated on: Sep 30, 2024 | 8:08 AM

ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಸಿಡಿಮದ್ದು ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯವರು ಫಿರಂಗಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಆನೆಗಳು ಭಾರೀ ಸದ್ದಿಗೆ ಹೊಂದಿಕೊಳ್ಳುವಂತೆ ತರಬೇತಿ ನೀಡಿದರು. ವಿಜಯದಶಮಿಯ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ಬಾರಿ ಕುಶಲತೋಪುಗಳನ್ನು ಸಿಡಿಸುವುದು ಸಂಪ್ರದಾಯ.

ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು.

ಅರಮನೆಯ ಮುಂಭಾಗ ವಸ್ತು ಪ್ರದರ್ಶನ ಆವರಣದಲ್ಲಿ ಆನೆಗಳಿಗೆ ಈ ತರಬೇತಿ ನೀಡಲಾಯಿತು. ಮೊದಲ ಸಲ ಒಟ್ಟು 14 ಆನೆಗಳು, 43 ಕುದುರೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು. ಆದರೆ ಎರಡನೇ ಬಾರಿ ಕೇವಲ 9 ಆನೆಗಳು ಹಾಗೂ 28 ಕುದುರೆಗಳು ಮಾತ್ರ ಭಾಗಿಯಾಗಿದ್ದವು. ಮೊದಲ ಬಾರಿಯ ಸಿಡಿಮದ್ದಿನ ತಾಲೀಮಿನಲ್ಲಿ ವಿಚಲಿತವಾದ ಆನೆಗಳನ್ನು ಇಂದು ಕರೆ ತಂದಿರಲಿಲ್ಲ.

ಸಿಡಿಮದ್ದಿನ ತಾಲೀಮಿನಲ್ಲಿ ಭಾಗಿಯಾಗಿದ್ದ ಆನೆಗಳು ಸದ್ದಿಗೆ ಬೆದರದೆ ಆರಾಮಗಿ ನಿಂತಿದ್ದವು. ಇನ್ನು ಸಿಡಿಮದ್ದು ಶಬ್ದಕ್ಕೆ ಕೆಲವು ಕುದುರೆಗಳು ಬೆಚ್ಚಿದರೆ, ಬಹುತೇಕ ಕುದುರೆಗಳು ಬೆದರದೆ ಉತ್ತಮವಾಗಿ ಸ್ಪಂದಿಸಿದವು. ಎರಡನೇ ಭಾರೀ ಸದ್ದಿನ ತಾಲೀಮಿನ್ನು ನೂರಾರು ಜನರು ಕಣ್ತುಂಬಿಕೊಂಡರು. ಅಂತಿಮ ಹಂತದ ತಾಲೀಮು ಬಾಕಿ ಇದ್ದು ದಸರಾ ಉದ್ಘಾಟನೆ ನಂತರ ನಡೆಯಲಿದೆ.

ಇನ್ನು ಕೊನೆಯ ಹಾಗೂ ಮೂರನೇ ಬಾರಿಯ ಸಿಡಿಮದ್ದು ತಾಲೀಮಿನತ್ತ ಎಲ್ಲರ ಚಿತ್ತ ನೆಟ್ಟಿದ್ದು ಕೊನೆಯ ಸಿಡಿಮದ್ದು ತಾಲೀಮಿನಲ್ಲಿ ಎಲ್ಲಾ ಆನೆಗಳು ಭಾಗಿಯಾಗುವ ನಿರೀಕ್ಷೆ ಇದೆ. ಒಟ್ಟಾರೆ ನಾಡಹಬ್ಬ ದಸರಾ ಜಂಬೂಸವಾರಿಗೆ ಸಿದ್ದತೆ ಜೋರಾಗಿ ನಡೆದಿದ್ದು ಎಲ್ಲವೂ ಸುಸೂತ್ರವಾಗಿ ನಡೆಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.









