Updated on:Sep 15, 2021 | 9:53 PM
ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸಿದ ಮಹೀಂದ್ರಾ ಥಾರ್ಗೆ ಪೈಪೋಟಿ ನೀಡಲು ಫೋರ್ಸ್ ಮೋಟರ್ಸ್ ಕಂಪೆನಿಯು ಹೊಸ ಗೂರ್ಖಾ ಎಸ್‌ಯುವಿ-2021 ಅನ್ನು ಇದೇ ತಿಂಗಳು 15 ರಂದು ಬಿಡುಗಡೆ ಮಾಡಲಿದೆ. 2020ರ ಆಟೋ ಎಕ್ಸ್‌ಪೋ ಪ್ರದರ್ಶಿಸಲಾಗಿರುವ ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್‌ಯುವಿ ಎಂಬುದು ವಿಶೇಷ.
ಫೋರ್ಸ್ ಗೂರ್ಖಾದ ವೈಶಿಷ್ಟ್ಯಗಳು- ಈ ವಾಹನದ ಮುಂಭಾಗದಲ್ಲಿ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ರೌಂಡ್ ಆಕಾರದ ಎಲ್‌ಇಡಿ ಹೆಡ್‌ಲೈಟ್‌ಗಳು, ಆಕರ್ಷಕ ಗ್ರಿಲ್ ಮತ್ತು ಫ್ರಂಟ್ ಬಂಪರ್ ನೀಡಲಾಗಿದೆ. ಹಾಗೆಯೇ ಫ್ರಂಟ್ ಫೆಂಡರ್‌ಗಳ ಮೇಲಿರುವ ಟರ್ನ್ ಇಂಡಿಕೇಟರ್‌ಗಳು, ವಾಟರ್-ವೇಡಿಂಗ್‌ಗಾಗಿ ಲಾಂಗ್ ಸ್ನಾರ್ಕೆಲ್ ಮತ್ತು ರೂಫ್ ಕ್ಯಾರಿಯರ್ ಇದರಲ್ಲಿ ಕಾಣಬಹುದು.
ಇನ್ನು ಫೋರ್ಸ್ ಗೂರ್ಖಾದ ಒಳಭಾಗ ಹಳೆಯ ಮಾದರಿಗಿಂತ ಹೆಚ್ಚು ಪ್ರೀಮಿಯಂ ಆಗಿರುತ್ತದೆ. ಇದನ್ನು ಸಂಪೂರ್ಣ ಕಪ್ಪು ಒಳಾಂಗಣ ಥೀಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ಆಫ್-ರೋಡಿಂಗ್ಗೆ ಅನುಕೂಲವಾಗುವಂತೆ ಧೂಳು ಮತ್ತು ನೀರು ನಿರೋಧಕವಾಗಿಸಲು ಸಾಕಷ್ಟು ಬಲವಾದ ಪ್ಲಾಸ್ಟಿಕ್ ಅನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಹೊಸ ತಂತ್ರಜ್ಞಾನದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 3-ಸ್ಪೋಕ್ ಸ್ಟೀರಿಂಗ್ ವೀಲ್ ಇದರಲ್ಲಿರುವ ನಿರೀಕ್ಷೆಯಿದೆ.
ಫೋರ್ಸ್ ಮೋಟಾರ್ 2021ರ ಗೂರ್ಖಾವನ್ನು ಎರಡು ಮಾಡೆಲ್ಗಳಲ್ಲಿ ಪರಿಚಯಿಸಲಿದೆ. ಒಂದರಲ್ಲಿ 2 ಡೋರ್ ಮಾತ್ರ ಇರಲಿದ್ದು, ಇನ್ನೊಂದರಲ್ಲಿ 5 ಡೋರ್ಸ್ ನೀಡಲಾಗುತ್ತಿದೆ. ಇಲ್ಲಿ ಎರಡು ಡೋರ್ಗಳ ವಾಹನ ಸ್ಪೋಟಿಂಗ್ ಮಾದರಿ ಅಥವಾ ಆಫ್ ರೋಡ್ ಮಾದರಿಗೆ ಹೆಚ್ಚು ಸೂಕ್ತ ಎನ್ನಲಾಗಿದೆ. ಇನ್ನು ಈ ಹೊಸ ವಾಹನ 2.6 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದ್ದು, ಅದು 89 ಬಿಎಚ್‌ಪಿ ಪವರ್ ಮತ್ತು 260 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಈ ಎಸ್‌ಯುವಿಯಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.
2021ರ ಫೋರ್ಸ್ ಗೂರ್ಖಾ ಈಗಾಗಲೇ ರಸ್ತೆಗಿಳಿದಿರುವ ಮಹೀಂದ್ರ ಥಾರ್ ಎಸ್‌ಯುವಿಯೊಂದಿಗೆ ಸ್ಪರ್ಧಿಸಲಿದೆ. ಥಾರ್ ಕಳೆದ ಅಕ್ಟೋಬರ್ 2 ರಂದು ಬಿಡುಗಡೆ ಆಗಿತ್ತು. ಇದಾಗ್ಯೂ ಆಫ್ ರೋಡ್ಗೆ ಸೂಕ್ತವಾಗುವಂತಹ ಯಾವುದೇ ಕಡಿಮೆ ಬೆಲೆಯ ಎಸ್‌ಯುವಿ ಭಾರತದಲ್ಲಿ ಬಿಡುಗಡೆ ಆಗಿರಲಿಲ್ಲ. ಇದೀಗ ಫೋರ್ಸ್ ಗೂರ್ಖಾ ಎಂಟ್ರಿಯೊಂದಿಗೆ ಥಾರ್ಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. ಹಾಗೆಯೇ ಹೊಸ ಗೂರ್ಖಾ ಬೆಲೆ ರೂ .10 ಲಕ್ಷದಿಂದ ರೂ .12 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುವ ಸಾಧ್ಯತೆಯಿದೆ.
Published On - 9:38 pm, Tue, 14 September 21