Updated on: Jun 15, 2022 | 12:11 PM
ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ 89.03 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶೇಷ ಎಂದರೆ ಈ ಸ್ಪರ್ಧೆಯಲ್ಲಿ 89 ಮೀಟರ್ಗೂ ಅಧಿಕ ದೂರ ಜಾವೆಲಿನ್ ಎಸೆಯುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. 24 ವರ್ಷದ ನೀರಜ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 88.07 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದರು. ಇದಾಗ್ಯೂ ಪಾವೊ ನೂರ್ಮಿ ಗೇಮ್ಸ್ನಲ್ಲಿ ಬೆಳ್ಳಿಪದಕಕ್ಕೆ ತೃಪ್ತಿಪಡಬೇಕಾಯಿತು.
ಇನ್ನು ಆಲಿವರ್ ಹೆಲ್ಯಾಂಡರ್ ಅತೀ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಆಲಿವರ್ 89.83 ಮೀ ಎಸೆದು ಚಿನ್ನ ಗೆದ್ದರು. ಹಾಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 86.60 ಮೀಟರ್ ದೂರ ಎಸೆದು ಕಂಚು ಗೆದ್ದರು. ಅಂದರೆ ನೀರಜ್ ಚೋಪ್ರಾ ಕೂದಲೆಳೆಯ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು.
ಟೋಕಿಯೊ ಒಲಿಂಪಿಕ್ಸ್ ನಂತರ ನೀರಜ್ ಚೋಪ್ರಾ ಅವರ ಮೊದಲ ಪಂದ್ಯಾವಳಿ ಇದಾಗಿದೆ. 10 ತಿಂಗಳ ನಂತರ ಅವರು ಸ್ಪರ್ಧೆಗೆ ಮರಳಿದ್ದು, ಈ ಮೂಲಕ ಮೊದಲ ಸ್ಪರ್ಧೆಯಲ್ಲೇ ಪದಕದೊಂದಿಗೆ ಮಿಂಚಿದ್ದಾರೆ. ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿ 88.07 ಮೀಟರ್ ಎಸೆದರು.
ನೀರಜ್ ಚೋಪ್ರಾ ಮೊದಲ ಬಾರಿಗೆ 89 ಮೀಟರ್‌ಗಳ ಗಡಿಯನ್ನು ಮುಟ್ಟಿದ್ದಾರೆ. ಇದಕ್ಕೂ ಮೊದಲು, ಕಳೆದ ವರ್ಷ ಪಟಿಯಾಲಾದಲ್ಲಿ ನಡೆದ ಭಾರತೀಯ ಜಿಪಿಯಲ್ಲಿ ಅವರು ಮಾಡಿದ 88.07 ಮೀಟರ್‌ಗಳ ಅತ್ಯುತ್ತಮ ಎಸೆತವಾಗಿತ್ತು. ಇದೀಗ ಆ ರಾಷ್ಟ್ರೀಯ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಒಲಿಂಪಿಕ್ಸ್ ಬಳಿಕ ನೀರಜ್ ಚೋಪ್ರಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿದ್ದು, ಈ ನಿರೀಕ್ಷೆಗಳನ್ನು ಉಳಿಸಿಕೊಳ್ಳುವಂತೆ ಪಾವೋ ನೂರ್ಮಿ ಫೀಲ್ಡ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭರ್ಜರಿಯಾಗಿ ಟ್ರ್ಯಾಕ್ಗೆ ಮರಳಿದ್ದಾರೆ.