- Kannada News Photo gallery Portuguese professional footballer cristiano ronaldo 1st player to reach 700 club goal record
Cristiano Ronaldo: 700 ಗೋಲು..! ಫುಟ್ಬಾಲ್ ಜಗತ್ತಿನಲ್ಲಿ ಮತ್ತೊಂದು ದೈತ್ಯ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ
Cristiano Ronaldo: ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಜಗತ್ತಿನಲ್ಲಿ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಕ್ಲಬ್ ಫುಟ್‌ಬಾಲ್‌ನಲ್ಲಿ 700 ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Updated on:Oct 10, 2022 | 4:22 PM

ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಜಗತ್ತಿನಲ್ಲಿ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಕ್ಲಬ್ ಫುಟ್‌ಬಾಲ್‌ನಲ್ಲಿ 700 ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಇಂಗ್ಲಿಷ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಎವರ್ಟನ್ ತಂಡದ ವಿರುದ್ಧ ಗೋಲು ಗಳಿಸುವ ಮೂಲಕ ರೊನಾಲ್ಡೊ ಈ ಸಾಧನೆ ಮಾಡಿದರು. ಈ ಗೋಲಿನೊಂದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಗೆಲುವಿನ ನಗೆ ಬೀರಿತು.

37 ವರ್ಷದ ರೊನಾಲ್ಡೊ ಅವರು 20 ವರ್ಷಗಳ ಹಿಂದೆ ಸ್ಪೋರ್ಟಿಂಗ್ ಲಿಸ್ಬನ್‌ನೊಂದಿಗೆ ತಮ್ಮ ಕ್ಲಬ್ ಫುಟ್‌ಬಾಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ 20 ವರ್ಷಗಳಲ್ಲಿ, ಅವರು ಸ್ಪೋರ್ಟಿಂಗ್ ಜೊತೆಗೆ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಕ್ಲಬ್ ತಂಡಗಳಿಗಾಗಿ ಆಡಿದ್ದಾರೆ. ಒಟ್ಟು 944 ಪಂದ್ಯಗಳನ್ನು ಆಡಿರುವ ರೊನಾಲ್ಡೊ 700 ಗೋಲುಗಳನ್ನು ಗಳಿಸಿದ್ದಾರೆ.

ಪೋರ್ಚುಗೀಸ್ ಫುಟ್ಬಾಲ್ ಕ್ಲಬ್ ಸ್ಪೋರ್ಟಿಂಗ್ ಲಿಸ್ಬನ್ ಪರವಾಗಿ 5 ಗೋಲು ಗಳಿಸಿದ್ದ ರೊನಾಲ್ಡೊ, ಒಂದು ಸೀಸನ್ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಸಹಿ ಹಾಕಿದರು. ಮ್ಯಾಂಚೆಸ್ಟರ್ ಯುನೈಟೆಡ್ ಪರ ಒಟ್ಟು 144 ಗೋಲುಗಳನ್ನು ಗಳಿಸಿದ ಅವರು ಬಳಿಕ ಸ್ಪ್ಯಾನಿಷ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಪರ 450 ಗೋಲುಗಳನ್ನು ಗಳಿಸಿದರು. ಈ ಗೋಲುಗಳೊಂದಿಗೆ ರಿಯಲ್ ಮ್ಯಾಡ್ರಿಡ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮ್ಯಾಡ್ರಿಡ್ ನಂತರ ಇಟಾಲಿಯನ್ ಫುಟ್ಬಾಲ್ ಕ್ಲಬ್ ಜುವೆಂಟಸ್ ಪರ ರೊನಾಲ್ಡೊ 101 ಗೋಲುಗಳನ್ನು ಗಳಿಸಿದರು.

ರೊನಾಲ್ಡೊ ತಮ್ಮ ಕ್ಲಬ್ ಫುಟ್ಬಾಲ್ ವೃತ್ತಿಜೀವನದಲ್ಲಿ ಒಟ್ಟು 50 ಬಾರಿ ಹ್ಯಾಟ್ರಿಕ್ ಗೋಲು ಗಳಿಸಿದ್ದಾರೆ. 700 ಗೋಲುಗಳಲ್ಲಿ 129 ಗೋಲುಗಳು ಪೆನಾಲ್ಟಿ ಸ್ಪಾಟ್‌ನಿಂದ ಬಂದಿವೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಚಾಂಪಿಯನ್ಸ್ ಲೀಗ್‌ನಲ್ಲಿ ಒಟ್ಟು 183 ಪಂದ್ಯಗಳನ್ನಾಡಿರುವ ರೊನಾಲ್ಡೊ 140 ಗೋಲುಗಳನ್ನು ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಲಿಯೋನೆಲ್ ಮೆಸ್ಸಿಗಿಂತ 13 ಗೋಲುಗಳ ಮುಂದಿದ್ದಾರೆ.

ರೊನಾಲ್ಡೊ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರ ಕೂಡ ಆಗಿದ್ದು, ಅವರು ಪೋರ್ಚುಗಲ್ ಪರ 189 ಪಂದ್ಯಗಳಲ್ಲಿ 117 ಗೋಲುಗಳನ್ನು ಗಳಿಸಿದ್ದಾರೆ.
Published On - 4:22 pm, Mon, 10 October 22
