
ಚಂದನವನದ ‘ಮೋಹಕ ತಾರೆ’ ರಮ್ಯಾ ದಿವ್ಯಾ ಸ್ಪಂದನಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಘೋಷಣೆ ಆಗಿದ್ದ ಈ ಸಿನಿಮಾ ನವೆಂಬರ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡಿದೆ. ರಾಜ್ ಬಿ. ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡುವುದರ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದಾರೆ.

ರಾಜ್ ಬಿ. ಶೆಟ್ಟಿ ಅವರಿಗೆ ಜೋಡಿಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹಾ ಶರ್ಮಾ, ಜೆ.ಪಿ. ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮಿಧುನ್ ಮುಕುಂದನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶೀರ್ಷಿಕೆ ಕಾರಣದಿಂದ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ಒಂದು ಪ್ರಬುದ್ಧವಾದ ಲವ್‌ಸ್ಟೋರಿ ಇದೆ. ಇದು ಒಂದು ಭಾವುಕ ಪ್ರಯಾಣ ಎಂದು ಚಿತ್ರತಂಡ ಹೇಳಿಕೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.