
ರಕ್ಷಾ ಬಂಧನ ಹಬ್ಬದಂದು, ತನ್ನ ಸೋದರ ಎಲ್ಲದರಲ್ಲೂ ವಿಜಯಶಾಲಿಯಾಗಲಿ ಎಂದು ಹಾರೈಸುತ್ತಾ ಸೋದರಿ ಆತನ ಕೈಗೆ ರಾಖಿ ಕಟ್ಟುತ್ತಾಳೆ. ತನಗೆ ಶುಭ ಹಾರೈಸುವ ಒಡಹುಟ್ಟಿದವಳಿಗೆ ಆತ ಉಡುಗೊರೆ ಕೊಡುತ್ತಾನೆ. ಹೀಗೆ ರಕ್ಷಾ ಬಂಧನ ಹಬ್ಬ ಚಾಲನೆಯಲ್ಲಿದೆ. ಸೋದರರಾಗಿ ಸೋದರಿಗೆ ಏನು ಗಿಫ್ಟ್ ಕೊಡಬಹುದು. ನೂರು, ಇನ್ನೂರು, ಐನ್ನೂರು, ಸಾವಿರ ರೂ ಹಣವನ್ನು ಆಕೆಗೆ ನೀಡಬಹುದು. ಅದಕ್ಕೂ ಮಿಗಿಲಾದ ಸಾಮರ್ಥ್ಯ ನಿಮ್ಮಲ್ಲಿದ್ದರೆ ಬೇರೆ ಅಮೂಲ್ಯ ಹಣಕಾಸು ಉಡುಗೊರೆಗಳಿವೆ...

ಉತ್ತಮ ರಿಟರ್ನ್ ತರಬಲ್ಲ ಯಂತ್ರಗಳಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತ ಗಿಫ್ಟ್ ಮತ್ತೊಂದಿಲ್ಲ. ನಿಮ್ಮ ಸೋದರಿ ಹೆಸರಲ್ಲಿ ಮ್ಯೂಚುವಲ್ ಫಂಡ್ ತೆರೆದು ಅದರಲ್ಲಿ ಹಣ ಹೂಡಿಕೆ ಮಾಡಿರಿ. ಲಂಪ್ಸಮ್ ಹಣ ಇಲ್ಲದಿದ್ದರೆ ಎಸ್ಐಪಿ ಮೂಲಕ ಹೂಡಿಕೆ ಆರಂಭಿಸಬಹುದು. ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಾದರೆ ನೇರವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ಇದು ನಿಮ್ಮ ಸೋದರಿಗೆ ನೀವು ತೋರುವ ಬದ್ಧತೆ.

ನಿಮ್ಮ ಸೋದರಿಗೆ ತುರ್ತಾಗಿ ಹಣದ ಅಗತ್ಯತೆ ಇದ್ದರೆ ಮೊದಲು ಅದಕ್ಕೆ ನೆರವಾಗಿ. ಆಕೆಗೆ ಲ್ಯಾಪ್ಟಾಪ್ ಬೇಕಾಗಿರಬಹುದು, ಹೊಸ ಫೋನ್ ಬೇಕಾಗಿರಬಹುದು, ತುಂಬಾ ಅಗತ್ಯ ಎನಿಸುವಂಥದ್ದು ಯಾವುದಾದರೂ ಬೇಕಾಗಿದ್ದರೆ ಅದನ್ನು ಕೊಡಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಬಹುದು. ಸಾಲ ಹೊಂದಿದ್ದರೆ ಅದನ್ನು ತೀರಿಸಲೂ ಯತ್ನಿಸಬಹುದು.

ಹೆಣ್ಮಕ್ಕಳಿಗೆ ಚಿನ್ನ ಬಲು ಪ್ರಿಯ. ಅವರ ಮದುವೆಗೂ ಚಿನ್ನದ ಅವಶ್ಯಕತೆ ಇರುತ್ತದೆ. ಹೀಗಾಗಿ, ಸಾಧ್ಯವಾದರೆ ಚಿನ್ನವನ್ನು ಖರೀದಿಸಿ. ಒಡವೆ ಅಂಗಡಿಗೆ ಹೋಗಿ ಚಿನ್ನ ಖರೀದಿಸಬಹುದು. ಪೇಟಿಎಂ ಇತ್ಯಾದಿ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ಆಗಿಯೂ ಚಿನ್ನ ಖರೀದಿಸಬಹುದು. ಗೋಲ್ಡ್ ಇಟಿಎಫ್ ಇತ್ಯಾದಿಯಲ್ಲೂ ಹೂಡಿಕೆ ಮಾಡಬಹುದು.

ಷೇರು ಮಾರುಕಟ್ಟೆಯಲ್ಲಿ ಹಾಕಿದ ಹಣ ಹೋಗಿಬಿಡಬಹುದು ಎಂಬ ಭಯ ಇದ್ದಲ್ಲಿ ಸಾಂಪ್ರದಾಯಿಕ ಹೂಡಿಕೆ ಯಂತ್ರಗಳಾದ ಫಿಕ್ಸೆಡ್ ಡೆಪಾಸಿಟ್ ಅಥವಾ ಆರ್ಡಿಯಲ್ಲಿ ಹಣ ಹಾಕಬಹುದು. ಇದರಿಂದ ನಿಮ್ಮ ಸೋದರಿಗೆ ಮುಂದಿನ ದಿನಗಳಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ.

ನಿಮ್ಮ ಕೈಯಲ್ಲಿ ಹೆಚ್ಚು ಮೊತ್ತದ ಹಣಕಾಸು ಗಿಫ್ಟ್ ಕೊಡುವುದು ಕಷ್ಟವೆನಿಸಿದಲ್ಲಿ ಚಿಂತೆ ಪಡಬೇಕಿಲ್ಲ. ನಿಮ್ಮ ಸೋದರಿ ನಿಮ್ಮಿಂದ ಬಯಸುವುದು ಪ್ರೀತಿ ಮತ್ತು ರಕ್ಷಣೆ ಮಾತ್ರ. ಆಕೆಗೆ ಈ ಅಭಯ ಕೊಡುವುದನ್ನು ಮಾತ್ರ ಮರೆಯದಿರಿ. ಸೋದರ ಸೋದರಿಯರ ಬಾಂಧವ್ಯ ಸಾಯುವವರೆಗೂ ಇರುತ್ತದೆ, ಹಾಗೆ ಇರುವಂತೆ ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಿ. (Pic credit: Pixabay)