
ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದಾರೆ ಎಂದರೂ ತಪ್ಪಾಗಲಾರದು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಪ್ಯಾನ್ ಇಂಡಿಯಾ ನಟಿ ಆಗಿದ್ದಾರೆ. ಈಗ ಅವರು ವೃತ್ತಿ ಜೀವನದಲ್ಲಿ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ‘AA22xA6’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಈಗಾಗಲೇ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್ ಅವರು ಸ್ಥಾನ ಪಡೆದಾಗಿದೆ. ಹೀಗಿರುವಾಗ ರಶ್ಮಿಕಾಗೇನು ಕೆಲಸ ಎಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಾಯಕಿ ಅಲ್ಲ, ಬದಲಿಗೆ ಅವರದ್ದು ನೆಗೆಟಿವ್ ಶೇಡ್ನ ಪಾತ್ರ ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ರಶ್ಮಿಕಾ ಅವರ ವೃತ್ತಿ ಜೀವನ ಉತ್ತುಂಗದಲ್ಲಿರುವಾಗ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ.

ನೆಗೆಟಿವ್ ಪಾತ್ರ ಮಾಡಿದರೆ ಅವರ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಒಂದು ನಂಬಿಕೆ ಅಷ್ಟೇ. ಈ ಮೊದಲು ರಮ್ಯಾ ಕೃಷ್ಣ ಅವರು ‘ನೀಲಾಂಬರಿ’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿ ಭೇಷ್ ಎನಿಸಿಕೊಂಡರು. ಈಗ ರಶ್ಮಿಕಾಗೆ ಅಂಥದ್ದೊಂದು ಅವಕಾಶ ಸಿಕ್ಕಿದೆ.

ರಶ್ಮಿಕಾ ಅವರು ಆರಂಭದಲ್ಲಿ ನಟನೆಯಲ್ಲಿ ಪಳಗಿರಲಿಲ್ಲ. ಆದರೆ, ದಿನಗಳು ಕಳೆದಂತೆ ಅವರ ನಟನೆ ಏಳ್ಗೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಆಫರ್ಗಳು ಕೂಡ ಬರುತ್ತಿವೆ. ಇತ್ತೀಚೆಗೆ ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾಗಳನ್ನು ಒಪ್ಪಿಕೊಂಡು ಗಮನ ಸೆಳೆದಿದ್ದಾರೆ.