‘ಕೆಜಿಎಫ್ 2’ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ರವೀನಾ ಟಂಡನ್ ಅವರ ತಂದೆ ರವಿ ಟಂಡನ್ ಅವರು ಶುಕ್ರವಾರ ನಿಧನ ಹೊಂದಿದ್ದಾರೆ. ಇದು ರವೀನಾ ಅವರಿಗೆ ಸಾಕಷ್ಟು ದುಃಖ ತಂದಿದೆ. ತಂದೆಯನ್ನು ಕಳೆದುಕೊಂಡ ಅವರಿಗೆ ಅನೇಕರು ಸಾಂತ್ವನ ಹೇಳುತ್ತಿದ್ದಾರೆ.
ರವಿ ಟಂಡನ್ ಅವರು ಜನಪ್ರಿಯ ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದರು. ಚಿತ್ರರಂಗದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
ರವೀನಾ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಅಂತ್ಯಕ್ರಿಯೆಯ ವೀಡಿಯೊಗಳು ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ರವೀನಾ ಅವರು ತುಂಬಾನೇ ಭಾವುಕರಾಗಿದ್ದರು.
‘ನೀವು ಯಾವಾಗಲೂ ನನ್ನೊಂದಿಗೆ ಇರುತ್ತೀರಿ. ನಾನು ಎಂದಿಗೂ ನಿಮ್ಮನ್ನು ಹೋಗಲು ಬಿಡುವುದಿಲ್ಲ. ಲವ್ ಯೂ ಅಪ್ಪಾ’ ಎಂದು ರವೀನಾ ಟಂಡನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಅನೇಕರು ಕಂಬನಿ ಮಿಡಿದಿದ್ದಾರೆ.
ಏಪ್ರಿಲ್ 14ರಂದು ‘ಕೆಜಿಎಫ್ 2’ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ರವೀನಾ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಅವರನ್ನು ತೆರೆಮೇಲೆ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
ರವೀನಾ ಟಂಡನ್