ಸತತ ಸೋಲುಗಳಿಂದ ಕಂಗೆಟ್ಟಿರುವ ಲಂಕಾ ತಂಡಕ್ಕೆ ಆಘಾತ; ವಿಶ್ವಕಪ್ನಿಂದ ಹೊರಬಿದ್ದ ತಂಡದ ನಾಯಕ..!
ICC World Cup 2023: ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಅಕ್ಟೋಬರ್ 10 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಶ್ರೀಲಂಕಾದ ನಾಯಕ ದಸುನ್ ಶನಕ, ನಡೆಯುತ್ತಿರುವ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ.
Updated on: Oct 15, 2023 | 11:14 AM

ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಅಕ್ಟೋಬರ್ 10 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಶ್ರೀಲಂಕಾದ ನಾಯಕ ದಸುನ್ ಶನಕ, ನಡೆಯುತ್ತಿರುವ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ.

ಇಂಜುರಿಗೊಂಡಿರುವ ದಸುನ್ ಶನಕ ಬದಲಿಗೆ ಬೌಲಿಂಗ್ ಆಲ್‌ರೌಂಡರ್ ಚಾಮಿಕಾ ಕರುಣಾರತ್ನ ಅವರನ್ನು ತಂಡಕ್ಕೆ ಮರು ಆಯ್ಕೆ ಮಾಡಲಾಗಿದೆ.

ವಾಸಿಂ ಖಾನ್, ಕ್ರಿಸ್ ಟೆಟ್ಲಿ, ಹೇಮಂಗ್ ಅಮೀನ್, ಗೌರವ್ ಸಕ್ಸೇನಾ ಅವರನ್ನು ಒಳಗೊಂಡ ಈವೆಂಟ್ ಟೆಕ್ನಿಕಲ್ ಕಮಿಟಿಯು ಶನಕ ಬದಲಿಗೆ ಚಾಮಿಕಾ ಅವರನ್ನು ಬದಲಿಸುವ ನಿರ್ಧಾರವನ್ನು ಅನುಮೋದಿಸಿದೆ.

ಈ ಬಗ್ಗೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿರುವ ಶ್ರೀಲಂಕಾ ಕ್ರಿಕೆಟ್, 1996 ರ ಏಕದಿನ ವಿಶ್ವಕಪ್ ಚಾಂಪಿಯನ್‌ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ನಾವು ಶನಕ ರೂಪದಲ್ಲಿ ಕೇವಲ ನಾಯಕನನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಇದರ ಜೊತೆಗೆ ಒಬ್ಬ ಪಂದ್ಯ-ವಿಜೇತ ಆಲ್‌ರೌಂಡರ್ ಅನ್ನು ಸಹ ಕಳೆದುಕೊಳ್ಳುತ್ತೇವೆ ಎಂದು ಬರೆದುಕೊಂಡಿದೆ.

ಶ್ರೀಲಂಕಾ ಕ್ರಿಕೆಟ್ ಪ್ರಕಾರ, ಶನಕ ಅವರು ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆ. ಇದೀಗ ಶನಕ ಬದಲು ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಂಡಿರುವ ಚಾಮಿಕಾ ಸಾಕಷ್ಟು ಅಂತಾರಾಷ್ಟ್ರೀಯ ಅನುಭವವನ್ನು ಹೊಂದಿದ್ದು, ಮುಂಬರುವ ಪಂದ್ಯಗಳಲ್ಲಿ ಅವಕಾಶ ಸಿಕ್ಕರೆ ತಂಡಕ್ಕೆ ಸೂಕ್ತ ಕೊಡುಗೆ ನೀಡಲಿದ್ದಾರೆ ಎಂದಿದೆ.

ಮೇ 28, 2021 ರಂದು ಮಿರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದೊಂದಿಗೆ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದ ಚಮಿಕಾ, ಕೊನೆಯ ಏಕದಿನ ಪಂದ್ಯವನ್ನು ಲಂಕಾ ಲಯನ್ಸ್ ಪರ ಮಾರ್ಚ್ 31 ರಂದು ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಆಡಿದ್ದರು.

ಚಮಿಕಾ ಇಲ್ಲಿಯವರೆಗೆ 23 ಏಕದಿನ ಪಂದ್ಯಗಳಲ್ಲಿ 28.83 ಸ್ಟ್ರೈಕ್ ರೇಟ್‌ನಲ್ಲಿ 24 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್ನಲ್ಲಿ 27.68 ಸರಾಸರಿ ಮತ್ತು 80.98 ಸ್ಟ್ರೈಕ್ ರೇಟ್ನೊಂದಿಗೆ 443 ರನ್ ಸಿಡಿಸಿದ್ದಾರೆ.

ಅಕ್ಟೋಬರ್ 16 ರಂದು ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ರೀಲಂಕಾ ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.



















