- Kannada News Photo gallery Valentine's Day Special Yash Radhika Pandit and other Sandalwood Celebrities Love story
ವ್ಯಾಲೆಂಟೈನ್ಸ್ ಡೇ ವಿಶೇಷ: ಸ್ಯಾಂಡಲ್ವುಡ್ನಲ್ಲಿ ಪ್ರೀತಿಸಿ ಮದುವೆ ಆದ ಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ
Valentine's Day: ಸ್ಯಾಂಡಲ್ವುಡ್ನಲ್ಲಿ ಅನೇಕರು ಅನೇಕರು ಪ್ರೇಮ ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್ವುಡ್ ಜೋಡಿಗಳ ಪಟ್ಟಿ ಇಲ್ಲಿದೆ.
Updated on: Feb 14, 2022 | 6:00 AM

ತೆರೆಯ ಮೇಲೆ ಮಾಡುವುದು ಕೇವಲ ಪಾತ್ರ. ಅಲ್ಲಿ ನಟಿಸುತ್ತಲೇ ಪ್ರೀತಿಗೆ ಬಿದ್ದವರು ಅನೇಕರಿದ್ದಾರೆ. ಸೆಟ್ನಲ್ಲಿ ಉಂಟಾಗುವ ಗೆಳೆತನ ನಂತರ ಹಸೆಮಣೆವರೆಗೂ ಕರೆದುಕೊಂಡು ಹೋಗಿಬಿಡುತ್ತದೆ. ಸ್ಯಾಂಡಲ್ವುಡ್ನಲ್ಲೂ ಇದೇ ರೀತಿ ಅನೇಕರು ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್ವುಡ್ ಜೋಡಿಗಳ ಪಟ್ಟಿ ಇಲ್ಲಿದೆ.

ಯಶ್-ರಾಧಿಕಾ: ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ನ ತುಂಬಾನೇ ಖ್ಯಾತಿ ಪಡೆದಿರುವ ಸೆಲೆಬ್ರಿಟಿಗಳು. ಇಬ್ಬರೂ ಕಿರುತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ‘ನಂದಗೋಕುಲ’ ಧಾರಾವಾಹಿಯಲ್ಲಿ. ನಂತರ, ಇಬ್ಬರೂ ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ. ನಂತರ ಈ ಜೋಡಿ ಮದುವೆ ಆಯಿತು.

ಐಂದ್ರಿತಾ-ದಿಗಂತ್: ಐಂದ್ರಿತಾ ರೇ ಹಾಗೂ ದಿಗಂತ್ ಇಬ್ಬರೂ ಮದುವೆ ಆಗಿದ್ದಾರೆ. ಇವರದ್ದು ಲವ್ ಮ್ಯಾರೇಜ್. ಐಂದ್ರಿತಾ ಸಂದರ್ಶನ ನೋಡಿದ್ದ ದಿಗಂತ್, ಈ ಹುಡುಗಿ ತುಂಬಾನೇ ಕ್ಯೂಟ್ ಆಗಿದ್ದಾರೆ ಎಂದುಕೊಂಡಿದ್ದರು. ಅಚ್ಚರಿ ಎಂಬಂತೆ, ‘ಮನಸಾರೆ’ ಸಿನಿಮಾದಲ್ಲಿ ಐಂದ್ರಿತಾ ಜತೆ ತೆರೆ ಹಂಚಿಕೊಳ್ಳುವ ಅವಕಾಶ ದಿಗಂತ್ಗೆ ಸಿಕ್ಕಿತ್ತು. ಈ ಸಿನಿಮಾ ಶೂಟಿಂಗ್ ವೇಳೆ ದಿಗಂತ್ ಅನಾರೋಗ್ಯಕ್ಕೆ ತುತ್ತಾದಾಗ ಐಂದ್ರಿತಾ ಹಣ್ಣನ್ನು ಕಳುಹಿಸಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಪ್ರೀತಿ ಮೊಳೆಯಲು ಇಷ್ಟು ಸಾಕಿತ್ತು.

ಅಂಬರೀಶ್-ಸುಮಲತಾ: ಅಂಬರೀಶ್-ಸುಮಲತಾ ಪ್ರೇಮಕತೆ ನಡೆದಿದ್ದು 90ರ ದಶಕದಲ್ಲಿ. ಇಬ್ಬರೂ ಅಂದಿನ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ನಲ್ಲಿದ್ದವರು. 1984ರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಲತಾ, ಅಂಬರೀಶ್ ಅವರನ್ನು ನೋಡಿದ್ದು. ಅದೂ ಕಾರ್ಯಕ್ರಮವೊಂದರಲ್ಲಿ. ನಂತರ ‘ಆಹುತಿ’ ಸಿನಿಮಾದ ಸೆಟ್ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಲ್ಲಿಂದ ಆರಂಭವಾದ ಪರಿಚಯ ಮದುವೆಗೆ ತಂದು ನಿಲ್ಲಿಸಿತ್ತು.

ಪ್ರಜ್ವಲ್ ದೇವರಾಜ್-ರಾಗಿಣಿ: ಪ್ರಜ್ವಲ್ ದೇವರಾಜ್-ರಾಗಿಣಿ ಅವರದ್ದು ಇಂದು ನಿನ್ನೆಯ ಪ್ರೀತಿಯಲ್ಲ. ಪ್ರಜ್ವಲ್ ದೇವರಾಜ್ 9ನೇ ಕ್ಲಾಸ್ನಲ್ಲಿದ್ದಾಗ ಅವರು ರಾಗಿಣಿ ಚಂದ್ರನ್ ಮೊದಲ ಬಾರಿಗೆ ನೋಡಿದ್ದರು. ಆಗ ರಾಗಿಣಿ ಚಂದ್ರನ್ 6ನೇ ಕ್ಲಾಸ್ನಲ್ಲಿದ್ದರು. ನಂತರ ಡ್ಯಾನ್ಸ್ ಕ್ಲಾಸ್ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಇವರ ಪ್ರೀತಿಗೆ ಮನೆಯಲ್ಲೂ ಒಪ್ಪಿಗೆ ಸಿಕ್ಕಿತ್ತು.

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ‘ಲವ್ ಮಾಕ್‌ಟೇಲ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 2015ರಲ್ಲಿ ತೆರೆಕಂಡ ‘ಚಾರ್ಲಿ’ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ‘ಚಾರ್ಲಿ’ ಚಿತ್ರದ ಶೂಟಿಂಗ್ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್ ಡ್ರೈವ್ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆಗೆ ನೇರವಾಗಿ ಪ್ರಪೋಸ್ ಮಾಡಿದ್ದರು. ಮಿಲನಾ ಕೂಡ ಇವರ ಪ್ರಪೋಸ್ ಒಪ್ಪಿಕೊಂಡಿದ್ದರು.

ಮೇಘನಾ ರಾಜ್- ಚಿರು ಸರ್ಜಾ: ‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಹೆಸರಿನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಮೇಘನಾ ರಾಜ್-ಚಿರಂಜೀವಿ ಸರ್ಜಾ ಭೇಟಿ ಆಗಿದ್ದರು. ನಂತರ ಮೇಘನಾಗೆ ಮೆಸೇಜ್ ಮಾಡಿ ಚಿರು ಮಾತು ಆರಂಭಿಸಿದ್ದರು. ದ್ವಾರಕೀಶ್ ನಿರ್ಮಾಣದ ಆಟಗಾರ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರು ಒಟ್ಟಿಗೆ ನಟಿಸಿದ್ದರು. ಗೆಳೆತನದ ಮೂಲಕ ಆರಂಭವಾದ ಇವರ ಸಂಬಂಧ ನಂತರ ಪ್ರೇಮದ ಹಾದಿ ತುಳಿದಿತ್ತು.




