ಇತ್ತೀಚಿನ ದಿನಗಳಲ್ಲಿ ಬೆಕ್ಕು ಮರಿ ಹಾಕಿದೊಡನೆ ಮರಿಗಳನ್ನು ಸಾಕಲು ಕಷ್ಟವಾಗುತ್ತದೆ ಎಂದು ರಸ್ತೆಬದಿಯಲ್ಲಿ ಬಿಟ್ಟು ಬರುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಕಾಯಿಲೆಯಿಂದ ಬಳಲುತ್ತಿರುವ ತನ್ನ ಬೆಕ್ಕಿಗೆ ಪ್ರತೀ ವರ್ಷ 11 ಲಕ್ಷ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಪ್ರತಿ ವರ್ಷ ಸುಮಾರು 11 ಲಕ್ಷ, ಅಂದರೆ ತಿಂಗಳಿಗೆ ಸುಮಾರು 91 ಸಾವಿರ ಖರ್ಚು ಮಾಡಿ ತನ್ನ ಮುದ್ದಿನ ಬೆಕ್ಕು ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತಾರೆ. ಬೆಕ್ಕಿನ ಮಾಲೀಕೆಯ ಹೆಸರು ಫೆಂಜಾ ಮೊಗೆನ್ಸೆನ್. ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ನಿವಾಸಿ.
ಬಾಲ್ಯದಿಂದಲೂ ಬೆಕ್ಕುಗಳನ್ನು ತುಂಬಾ ಇಷ್ಟಪಡುತ್ತಿದ್ದ ಫೆಂಜಾ, ಸುಮಾರು 10 ವರ್ಷಗಳ ಹಿಂದೆ ಅಂದರೆ 2013ರಲ್ಲಿ ಈ ಬೆಕ್ಕನ್ನು ದತ್ತು ಪಡೆದುಕೊಂಡಿದ್ದರು. ಆದರೆ ಕೆಲವು ವರ್ಷಗಳ ಹಿಂದೆಯಷ್ಟೇ ತನ್ನ ಮುದ್ದಿನ ಬೆಕ್ಕಿಗೆ ಮಾರಣಾಂತಿಕ ಕಾಯಿಲೆ ಇದೆ ಎಂಬುದು ತಿಳಿದುಬಂದಿದೆ.
ಈ ಬೆಕ್ಕು ಆನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿದೆ. ಹುಟ್ಟಿನಿಂದಲೇ ಕಿವುಡಾಗಿರುವ ಈ ಬೆಕ್ಕು ಅಸ್ತಮಾ ಜತೆಗೆ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವೈದ್ಯರು ದೃಢಪಟ್ಟಿಸಿದ್ದರು.
ಔಷಧಿಗಳಿಂದ ಹಿಡಿದು ಆಹಾರ ಪದಾರ್ಥಗಳವರೆಗೆ ತನ್ನ ಮುದ್ದಿನ ಬೆಕ್ಕಿನ ಚಿಕಿತ್ಸೆಗಾಗಿ ಪ್ರತಿ ವರ್ಷ ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡುತ್ತಿದ್ದೇನೆ ಎಂದು ಫೆಂಜಾ ಹೇಳುತ್ತಾರೆ.
ಸದ್ಯ ಫೆಂಜಾ ತನ್ನ ಮುದ್ದಿನ ಬೆಕ್ಕನ್ನು ಉಳಿಸಿಕೊಳ್ಳಲು ಯಾವ ರೀತಿ ಕಷ್ಟ ಪಡುತ್ತಿದ್ದೇನೆ ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈಕೆ ಬೆಕ್ಕಿನ ಮೇಲೆ ಇಟ್ಟಿರುವ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 10:45 am, Wed, 17 January 24