- Kannada News Photo gallery Wrestler Bajrang Punia receives death threat message on WhatsApp kannada news
‘ಕಾಂಗ್ರೆಸ್ ತೊರೆಯಿರಿ ಇಲ್ಲದಿದ್ದರೆ…’; ಕುಸ್ತಿಪಟು ಬಜರಂಗ್ ಪುನಿಯಾಗೆ ಜೀವ ಬೆದರಿಕೆ
Bajrang Punia: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷವನ್ನು ಸೇರಿದ ಕೆಲವೇ ದಿನಗಳಲ್ಲಿ ಬಜರಂಗ್ ಪೂನಿಯಾಗೆ ಕೊಲೆ ಬೆದರಿಕೆ ಬಂದಿದೆ. ವಿದೇಶಿ ಸಂಖ್ಯೆಯಿಂದ ತನಗೆ ಬೆದರಿಕೆ ಸಂದೇಶ ಬಂದಿದೆ ಎಂದು ಬಜರಂಗ್ ಆರೋಪಿಸಿದ್ದಾರೆ.
Updated on: Sep 08, 2024 | 8:00 PM

ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷವನ್ನು ಸೇರಿದ ಕೆಲವೇ ದಿನಗಳಲ್ಲಿ ಬಜರಂಗ್ ಪೂನಿಯಾಗೆ ಕೊಲೆ ಬೆದರಿಕೆ ಬಂದಿದೆ. ವಿದೇಶಿ ಸಂಖ್ಯೆಯಿಂದ ತನಗೆ ಬೆದರಿಕೆ ಸಂದೇಶ ಬಂದಿದೆ ಎಂದು ಬಜರಂಗ್ ಆರೋಪಿಸಿದ್ದಾರೆ.

‘ಆದಷ್ಟು ಬೇಗ ಕಾಂಗ್ರೆಸ್ ತೊರೆಯಬೇಕು ಇಲ್ಲದಿದ್ದರೆ ನಿಮಗೂ, ನಿಮ್ಮ ಕುಟುಂಬಕ್ಕೂ ಕಂಟಕ ಕಾದಿದೆ. ಇದು ನಮ್ಮ ಕೊನೆಯ ಸಂದೇಶ. ಚುನಾವಣೆಗೂ ಮುನ್ನ ನಾವೇನು ಎಂಬುದನ್ನು ತೋರಿಸುತ್ತೇವೆ. ನೀವು ಎಲ್ಲಿ ಬೇಕಾದರೂ ದೂರು ನೀಡಿ, ಇದು ನಮ್ಮ ಮೊದಲ ಮತ್ತು ಕೊನೆಯ ಎಚ್ಚರಿಕೆ’ ಎಂದು ಅನಾಮಿಕ ವ್ಯಕ್ತಿಯಿಂದ ಸಂದೇಶ ಬಂದಿದೆ ಎಂದು ಬಜರಂಗ್ ತಿಳಿಸಿದ್ದಾರೆ.

ಇನ್ನು ಬೆದರಿಕೆಯ ಸಂದೇಶ ಬಂದ ನಂತರ ಬಜರಂಗ್, ಸೋನಿಪತ್ ಬಹಲ್ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಜರಂಗ್ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವಕ್ತಾರ ರವೀಂದ್ರ ಸಿಂಗ್, 'ಬಜರಂಗ್ ಪುನಿಯಾ ಸೋನಿಪತ್‌ನ ಬಹಲ್‌ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರಿಗೆ ಹೊರಗಿನ ಸಂಖ್ಯೆಯಿಂದ ಸಂದೇಶ ಬಂದಿದೆ.

ಅವರ ದೂರಿನ ಮೇರೆಗೆ ಪೊಲೀಸ್ ತನಿಖೆ ಮುಂದುವರಿದಿದೆ. ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅದರ ಬಗ್ಗೆ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಬೆದರಿಕೆ ಹಾಕಿದ ವ್ಯಕ್ತಿಯನ್ನು ಗುರುತಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಮೇಲೆ ಹೇಳಿದಂತೆ ಭಜರಂಗ್ ಮತ್ತು ವಿನೇಶ್ ಫೋಗಟ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಬಜರಂಗ್ ಪುನಿಯಾಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ, ವಿನೇಶ್ ಫೋಗಟ್ ಹರಿಯಾಣ ವಿಧಾನಸಭೆಯ ಜೂಲಾನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇನ್ನು ಟಿಕೆಟ್ ಸಿಗದಿರುವ ಬಗ್ಗೆ ಮಾತನಾಡಿದ ಬಜರಂಗ್, ಚುನಾವಣೆಗೆ ಸ್ಪರ್ಧಿಸುವುದು ರಾಜಕೀಯವಲ್ಲ. ಈ ಹಿಂದೆಯೂ ಇಬ್ಬರಲ್ಲಿ ಒಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾತುಕತೆ ನಡೆಸಿದ್ದೆವು. ಅದರಂತೆ ವಿನೇಶ್ ಫೋಗಟ್ಗೆ ಟಿಕೆಟ್ ಸಿಕ್ಕಿದು ನಾನು ಅವಳನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

ಇದೀಗ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಬಜರಂಗ್ ಅವರನ್ನು ಕಾಂಗ್ರೆಸ್ ಕಿಸಾನ್ ಮೋರ್ಚಾದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇನ್ನು ಕಾಂಗ್ರೆಸ್ ಸೇರಿದ ತಕ್ಷಣ ಆಡಳಿತ ಪಕ್ಷ ಬಿಜೆಪಿಯ ಮೇಲೆ ಹರಿಹಾಯ್ದಿದ್ದ ಬಜರಂಗ್, ಕುಸ್ತಿಪಟುಗಳ ಹೋರಾಟದಲ್ಲಿ ಬಿಜೆಪಿ ನಮ್ಮೊಂದಿಗೆ ನಿಲ್ಲಲಿಲ್ಲ. ಆದರೆ ಕಾಂಗ್ರೆಸ್ ದೇಶದ ಹೆಣ್ಣು ಮಕ್ಕಳ ಜೊತೆ ನಿಲ್ಲುತ್ತದೆ. ಹೀಗಾಗಿ ನಾವು ಕಾಂಗ್ರೆಸ್ ಪಕ್ಷ ಸೇರಿರುವುದಾಗಿ ತಿಳಿಸಿದ್ದರು.




