- Kannada News Photo gallery Yadgir District Hayyal Village Water Crisis: villagers Risk Lives for Drinking Water
ಮಳೆಗಾಲದಲ್ಲೂ ನೀರಿಗೆ ಹಾಹಾಕಾರ: ನದಿ ತುಂಬಿ ಹರಿಯುತ್ತಿದ್ರೂ ಯಾದಗಿರಿ ಜನಕ್ಕಿಲ್ಲ ಕುಡಿಯುವ ನೀರು
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಹಯ್ಯಾಳ ಗ್ರಾಮದ ಜನರು ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿದ್ದಾರೆ. ನೀರು ಸರಬರಾಜು ಮಾಡುವ ಮೋಟಾರ್ ರಿಪೇರಿಯಾಗದ ಕಾರಣ ಜನರು ಕೃಷ್ಣ ನದಿಯಿಂದ ಅಪಾಯದ ಮಧ್ಯೆ ನೀರು ತರುತ್ತಿದ್ದಾರೆ. 15 ದಿನಗಳಿಂದ ಈ ಪರಿಸ್ಥಿತಿ ಮುಂದುವರಿದಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊಸಳೆ ದಾಳಿಯ ಭಯವೂ ಜನರನ್ನು ಕಾಡುತ್ತಿದೆ.
Updated on: Jun 30, 2025 | 4:48 PM

ಯಾದಗಿರಿ ಜಿಲ್ಲೆಯ ಈ ಗ್ರಾಮದಲ್ಲಿನ ಜನರು ಕುಡಿಯಲು ನೀರು ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ನೀರು ಬೇಕು ಅಂದ್ರೆ, ಜೀವದ ಹಂಗು ತೊರೆದು ನದಿಯಲ್ಲಿ ಇಳಿದು ಕುಡಿಯಲು ನೀರು ತರಬೇಕು. ಕಳೆದ 15 ದಿನಗಳಿಂದ ನಿತ್ಯ ಗ್ರಾಮದ ಜನರು ನೀರು ತರುತ್ತಿದ್ದಾರೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ. ಹೌದು, ಕೆಟ್ಟು ಹೋದ ಮೋಟಾರನ್ನು ರಿಪೇರಿ ಮಾಡಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ರಾಜ್ಯಾದ್ಯಂತ ಮುಂಗಾರು ಮಳೆಯಾಗುತ್ತಿದೆ. ಮಳೆಯಿಂದ ನದಿ, ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಜೊತೆಗೆ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಇಷ್ಟು ಪ್ರಮಾಣದಲ್ಲಿ ಮಳೆಯಾದರೂ ಕೂಡ ಯಾದಗಿರಿ ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಹಯ್ಯಾಳ ಗ್ರಾಮದ ಜನ ಕಳೆದ 15 ದಿನಗಳಿಂದ ಹನಿ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯಲು ನೀರಲ್ಲದೆ ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮೋಟಾರು ಕೆಟ್ಟು ಹೋಗಿ 15 ದಿನ ಕಳೆದರೂ ಇನ್ನೂವರೆಗೂ ರಿಪೇರಿ ಮಾಡಿಸದೇ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ.

ಇದೇ ಕಾರಣಕ್ಕೆ ಗ್ರಾಮದ ಜನ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕುಡಿಯಲು ನೀರು ಬೇಕು ಅಂದ್ರೆ ಕೃಷ್ಣ ನದಿಯಿಂದ ತರುವಂತಾಗಿದೆ. ಮೊದಲೇ, ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಅದರಲ್ಲೂ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ. ಹೀಗಾಗಿ, ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಭಸವಾಗಿ ಹರಿಯುವ ನದಿಗೆ ಇಳಿದು ಈ ಹಯ್ಯಾಳ ಗ್ರಾಮದ ಜನ ನೀರು ತಂದು ಕುಡಿಯಬೇಕಾಗಿದೆ.

ಕಳೆದ 15 ದಿನಗಳಿಂದ ಈ ಗ್ರಾಮದಲ್ಲಿ ಇದೆ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿರುವ ನಲ್ಲಿಗಳಲ್ಲಿ ನೀರು ಬಾರದಕ್ಕೆ ಜನ ಬೆಳಗ್ಗೆಯಿಂದ ಸಂಜೆಯವರೆಗೆ ಖಾಲಿ ಬಿಂದಿಗೆಗಳನ್ನು ಹಿಡಿದುಕೊಂಡು ಕೃಷ್ಣ ನದಿ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಮನೆಯಲ್ಲಿರುವ ಮಹಿಳೆಯರು, ಪುರುಷರು ಹಾಗೂ ಮಕ್ಕಳೆನ್ನದೆ ಪ್ರತಿಯೊಬ್ಬರೂ ನೀರು ತರಬೇಕಾಗಿದೆ.

ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಮೊಸಳೆಗಳ ಭಯ ಕೂಡ ಹೆಚ್ಚಾಗಿದೆ. ಮೊಸಳೆ ದಾಳಿ ಮಾಡುವ ಆತಂಕದಲ್ಲೇ ಜನರು ನದಿಯಲ್ಲಿ ಇಳಿದು ನೀರು ತುಂಬಿಕೊಂಡು ಬರುತ್ತಿದ್ದಾರೆ. ನೀರು ತರದೆ ಹೋದ್ರೆ ಕುಡಿಯಲು ನೀರು ಇರಲ್ಲ, ಅಡುಗೆ ಕೂಡ ಆಗಲ್ಲ. ಅಡುಗೆ ಆಗಿಲ್ಲ ಅಂದರೆ ಕೃಷಿ ಕೆಲಸಕ್ಕೆ ಹೋಗಲು ಆಗಲ್ಲ. ಮನೆಯಲ್ಲಿ ಬೈಕ್ ಇದ್ದವರು ಒಂದೇ ಬಾರಿಗೆ ನಾಲ್ಕು ಬಿಂದಿಗೆಗಳನ್ನ ಬೈಕ್ಗೆ ಕಟ್ಟಿಕೊಂಡು ನೀರು ತರುತ್ತಾರೆ. ಬೈಕ್ ಇಲ್ಲದೆ ಇರುವವರು ತಲೆ ಮೇಲೆ ಬಿಂದಿಗೆ ಹೊತ್ತುಕೊಂಡು ನೀರು ತರಬೇಕಾಗಿದೆ.

ಗ್ರಾಮದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಈ ಕೃಷ್ಣ ನದಿ ನೀರೇ ಗ್ರಾಮಸ್ಥರಿಗೆ ಸದ್ಯಕ್ಕೆ ಗತಿಯಾಗಿದೆ. ಮಳೆ ಬಂದರೆ, ನದಿಗೆ ಹೋಗುವ ದಾರಿ ಕೂಡ ಸಂಪೂರ್ಣ ಹಾಳಾಗಿ ಹೋಗಿ ಕೆಸರು ಗದ್ದೆಯಂತಾಗುತ್ತೆ. ರಸ್ತೆ ಹದಗೆಟ್ಟರೂ ಜನ ನೀರು ತರಬೇಕಾಗಿದೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯನ್ನು ಅನುಭಿವಿಸಿದ ನಮಗೆ ಮಳೆಗಾಲದಲ್ಲೂ ಅದೇ ಸ್ಥಿತಿ ಇದೆ ಅಂತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.









