ಯಾದಗಿರಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು
Yadgiri: ನಗರದ ರಸ್ತೆಗಳ ಮೇಲೆ ಓಡಾಡಬೇಕು ಅಂದರೆ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕು. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಪ್ರಾಣ ಪಕ್ಷಿ ಹಾರಿ ಹೋಗುವುದು ಗ್ಯಾರಂಟಿ.
Updated on:Nov 07, 2022 | 12:54 PM

Yadgiri Potholes on main roads in Yadgir city news in kannada

Yadgiri Potholes on main roads in Yadgir city news in kannada

ನಿತ್ಯ ಸಾವಿರಾರು ವಾಹನ ಸಂಚಾರ ವಾಗುತ್ತಿದ್ದರೂ ಅಧಿಕಾರಿಗಳು ಗುಂಡಿಗಳನ್ನ ಮುಚ್ಚಿಸುವ ಸಣ್ಣ ಕೆಲಸಕ್ಕೆ ಮುಂದಾಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಹತ್ತಿಕುಣಿ ಕ್ರಾಸ್ ರಸ್ತೆ ಮೇಲೆ ವಾಹನ ಸವಾರರು ಓಡಾಡಬೇಕು ಅಂದರೆ ನೂರು ಬಾರಿ ಯೋಚನೆ ಮಾಡಿ ವಾಹನ ಓಡಿಸುವಂತಾಗಿದೆ.

ನಗರದಿಂದ ಹಾದುಹೋಗುವ ಹೈದ್ರಾಬಾದ್ ರಸ್ತೆ ಕೂಡ ಸಂಪೂರ್ಣವಾಗಿ ಗುಂಡಿಮಯವಾಗಿದೆ. ಯಲಸತ್ತಿ ಪೆಟ್ರೋಲ್ ಬಂಕ್ ಬಳಿ ಸುಮಾರು 3 ಅಡಿಯಷ್ಟು ತಗ್ಗುಗುಂಡಿಗಳು ಬಿದ್ದಿವೆ. ಇದಕ್ಕೆ ಮಣ್ಣು ಹಾಕಿ ಅಧಿಕಾರಿಗಳು ಕೈತೊಳೆದಿದ್ದಾರೆ. ಇದರಿಂದ ಮಳೆ ಬಂದಾಗ ರಸ್ತೆ ಮತ್ತಷ್ಟ ಹಾಳಾಗಿ ಹೋಗುತ್ತಿದೆ. ಜೊತೆಗೆ ಈ ರಸ್ತೆ ಮೇಲೆ ಓಡಾಡುವಾಗ ಮಣ್ಣಿನಿಂದ ದೂಳು ಎದ್ದು ಮುಂಬರುವ ವಾಹನಗಳು ಕಾಣದಂತ ಸ್ಥಿತಿ ಕೂಡ ನಿರ್ಮಾಣವಾಗಿದೆ.

ಇನ್ನು ಕೆಲವು ಕಡೆ ಗುಂಡಿಗಳನ್ನ ಮುಚ್ಚಲು ಅಧಿಕಾರಿಗಳು ಸಿಮೆಂಟ್ ಕಾಂಕ್ರಿಟ್ ಬಳಸಿದ್ದಾರೆ. ಇದರಿಂದಾಗಿ ರಸ್ತೆ ತುಂಬೆಲ್ಲ ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ರಾತ್ರಿ ವೇಳೆ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆ ಯಾದಗಿರಿ ನಗರಸಭೆ ಆಯುಕ್ತರಿಗೆ ಕೇಳಿದರೆ ಡಾಂಬರ್ ಪ್ಲಾಂಟ್ಗಳು ಬಂದ್ ಆಗಿವೆ. ಹೀಗಾಗಿ ನಾವು ಗುಂಡಿ ಮುಚ್ಚಲು ಸಿಮೆಂಟ್ ಮತ್ತು ಕಾಂಕ್ರಿಟ್ ಬಳಸಿದ್ದೇವೆ ಅಂತ ಸಬೂಬು ನೀಡುತ್ತಿದ್ದಾರೆ. (ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ)
Published On - 10:56 am, Mon, 7 November 22
























