
ನಟ ಭುವನ್ ಪೊನ್ನಣ್ಣ ಅವರು ‘ರಾಂಧವ’ ಸಿನಿಮಾ ಮಾಡಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದರು. ಈಗ ಇನ್ನಷ್ಟು ತಯಾರಿಯೊಂದಿಗೆ ಹೊಸ ಸಿನಿಮಾ ಆರಂಭಿಸಿದ್ದಾರೆ. ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಜೊತೆ ಅವರು ಕೈ ಜೋಡಿಸಿದ್ದಾರೆ.

ಈ ಸಿನಿಮಾಗೆ ‘ಹಲೋ 123’ ಎಂದು ಶೀರ್ಷಿಕೆ ಇಡಲಾಗಿದೆ. ಭುವನ್ ಪೊನ್ನಣ್ಣ, ಯೋಗರಾಜ್ ಭಟ್ ಅವರ ಕಾಂಬಿನೇಷನ್ ಜೊತೆಗೆ ಹರಿಕೃಷ್ಣ ಅವರ ಸಂಗೀತ ಕೂಡ ಜೊತೆಯಾಗುತ್ತಿದೆ. ‘ಹಲೋ 123’ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಲಾಗಿದೆ.

ಸೆಪ್ಟೆಂಬರ್ 3ರ ಸಂಜೆ ‘ಹಲೋ 123’ ಸಿನಿಮಾದ ನಿರ್ಮಾಪಕ ವಿಜಯ್ ಟಾಟಾರ ಮನೆಯ ಅಂಗಳದಲ್ಲಿ ಸ್ಕ್ರಿಪ್ಟ್ ಪೂಜೆ ಮತ್ತು ಶೀರ್ಷಿಕೆ ಅನಾವರಣ ಮಾಡಲಾಯಿತು. ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಹರ್ಷಿಕಾ ಮತ್ತು ಭುವನ್ ದಂಪತಿಯ ಪುತ್ರಿ ತ್ರಿದೇವಿ ಅಮೃತ ಹಸ್ತದಿಂದ ‘ಹಲೋ 123’ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷ. ದೇವರ ಪೂಜೆ ಬಳಿಕ ಭುವನ್, ಯೋಗರಾಜ್ ಭಟ್, ವಿ. ಹರಿಕೃಷ್ಣ ಅವರಿಗೆ ಅಡ್ವಾನ್ಸ್ ಕೊಟ್ಟು ನಿರ್ಮಾಪಕರು ಶುಭಕೋರಿದರು.

ಒಳ್ಳೆಯ ದಿನ ಎಂಬ ಕಾರಣಕ್ಕೆ ಸಿನಿಮಾ ಮಾತುಕತೆ ಮಾಡಿದ ಮರುದಿನವೇ ಸಿನಿಮಾಗೆ ಚಾಲನೆ ನೀಡಲಾಯಿತು. ಯೋಗರಾಜ್ ಭಟ್ ಅವರು ಅಮೆರಿಕ ಪ್ರವಾಸ ಮುಗಿಸಿ ಬಂದ ಕೂಡಲೇ ಉಳಿದ ಕೆಲಸಗಳು ಶುರುವಾಗಲಿವೆ. ಮುಂದಿನ ವರ್ಷ ಚಿತ್ರ ತೆರೆಕಾಣಲಿದೆ.