Ekka Movie: ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ‘ಎಕ್ಕ’ ಸಿನಿಮಾ ತಂಡ
‘ಎಕ್ಕ’ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ಯುವ ರಾಜ್ಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಾಪಕರಾದ ಕಾರ್ತಿಕ್ ಗೌಡ, ಜಯಣ್ಣ, ಯೋಗಿ ಜಿ. ರಾಜ್ ಮುಂತಾದವರು ಕೂಡ ಈ ವೇಳೆ ಜೊತೆಗಿದ್ದರು. ಶೀಘ್ರದಲ್ಲೇ ರಿಲೀಸ್ ಆಗಲಿರುವ ಈ ಸಿನಿಮಾಗೆ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ.
Updated on: Jul 11, 2025 | 9:36 PM

ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು (ಜುಲೈ 11) ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಅದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಚಿತ್ರತಂಡದವರು ಭೇಟಿ ಮಾಡಿದ್ದಾರೆ.

ಸಿನಿಮಾದ ನಾಯಕ ನಟ ಯುವ ರಾಜ್ಕುಮಾರ ಸೇರಿದಂತೆ ‘ಎಕ್ಕ’ ಚಿತ್ರತಂಡದ ಪ್ರಮುಖರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ಈ ಭೇಟಿ ನಡೆದಿದೆ. ಆ ಸಂದರ್ಭದ ಫೋಟೋಗಳು ಇಲ್ಲಿವೆ.

‘ಎಕ್ಕ’ ಚಿತ್ರತಂಡಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ. ಜುಲೈ 18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಅದ್ದೂರಿಯಾಗಿ ‘ಎಕ್ಕ’ ಸಿನಿಮಾ ನಿರ್ಮಾಣ ಆಗಿದೆ.

ಡಾ. ರಾಜ್ಕುಮಾರ್ ಮೊಮ್ಮಗ ಯುವ ರಾಜ್ಕುಮಾರ್ ಅವರು ನಟಿಸಿರುವ ಎರಡನೇ ಸಿನಿಮಾ ಇದು. ಅಶ್ವಿನಿ ಪುನೀತ್ ರಾಜ್ಕುಮಾರ್, ಕಾರ್ತಿಕ್ ಗೌಡ, ಜಯಣ್ಣ ಅವರು ಒಟ್ಟಾಗಿ ‘ಎಕ್ಕ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಟ್ರೇಲರ್ ಕೂಡ ಸದ್ದು ಮಾಡುತ್ತಿದೆ. ತುಂಬಾ ಮಾಸ್ ಆಗಿ ಈ ಸಿನಿಮಾ ಮೂಡಿಬಂದಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗುತ್ತಿದೆ.




