ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಶಿವಸೇನಾದ (Shiv Sena) 18 ಲೋಕಸಭಾಸಂಸದರ ಪೈಕಿ 13 ಸಂಸದರು ರಾಷ್ಟ್ರಪತಿ ಚುನಾವಣೆಯ ಬಗ್ಗೆ ಸೋಮವಾರ ನಡೆದ ಮಹತ್ತರವಾದ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಂಸದರು ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಬೆಂಬಲ ನೀಡಬೇಕು ಎಂದು ಸೂಚಿಸಿರುವುದಾಗಿ ಪಕ್ಷದ ನಾಯಕ ಗಜಾನನ್ ಕಿರೀತ್ಕರ್ ಹೇಳಿದ್ದಾರೆ. ಆದಾಗ್ಯೂ ಸಂಸದ ಮತ್ತು ಶಿವಸೇನಾದ ಮುಖ್ಯ ವಕ್ತಾರ ಸಂಜಯ್ ರಾವುತ್, 18 ಸಂಸದರು ಲೋಕಸಭೆಯಲ್ಲಿದ್ದಾರೆ, 15 ಮಂದಿ ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ಮಹಾರಾಷ್ಟ್ರದ 18 ಲೋಕಸಭಾ ಸಂಸದರು ಮಾತ್ರವಲ್ಲದೆ ದಾದರ್ , ನಾಗರ್ ಹವೇಲಿ ಮತ್ತು ದಾಮನ್ ದಿವು ಕೇಂದ್ರಾಡಳಿತ ಪ್ರದೇಶದಲ್ಲಿ ಶಿವಸೇನಾಗೆ ಕಾಲಾಬೆನ್ ದೇಲ್ಕರ್ ಎಂಬ ಸಂಸದರಿದ್ದಾರೆ.
13 ಸಂಸದರು ಖುದ್ದಾಗಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನುಳಿದ ಮೂವರು ಸಂಜಯ್ ಜಾದವ್, ಸಂಜಯ್ ಮಾಂಡಲಿಕ್ ಮತ್ತು ಹೇಮಂತ್ ಪಾಟಿಲ್ ಸಭೆಗೆ ಬಂದಿಲ್ಲ. ಆದರೆ ಅವರು ನಾಯಕತ್ವದ ಬೆಂಬಲಕ್ಕೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಹೆಚ್ಚಿನ ಸಂಸದರು ದ್ರೌಪದಿ ಮುರ್ಮು ಅವರಿಗೆ ಪಕ್ಷ ಬೆಂಬಲ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕಿರೀತ್ಕರ್ ಹೇಳಿದ್ದಾರೆ.
ಭಾವನಾ ಗವಾಲಿ ಮತ್ತು ಶ್ರೀಕಾಂಕ್ ಶಿಂಧೆ ಸಭೆಗೆ ಹಾಜರಾಗಿಲ್ಲ ಎಂದು ಅವರು ಹೇಳಿದ್ದಾರೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.
Published On - 6:03 pm, Mon, 11 July 22