ಬೆಂಗಳೂರು, ಜ.25: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಬಿಜೆಪಿ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ನಿರ್ಧರಿಸಿದಂತಿದೆ. ಅಲ್ಲದೆ, ಶೆಟ್ಟರ್ ಜೊತೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ರಾಜ್ಯದ ನಾಯಕರು ವರಿಷ್ಠರ ಮೇಲೆ ಹಾಕಿದ್ದು, ಖುದ್ದು ಅಮಿತ್ ಶಾ (Amit Shah) ಅವರೇ ಅಖಾಡಕ್ಕಿಳಿದಿದ್ದಾರೆ. ಶೆಟ್ಟರ್ ಜೊತೆ ಬಿಜೆಪಿ ತೊರೆದು ಕಾಂಗ್ರೆಸ್ ಸೆರ್ಪಡೆಯಾಗಿ ಶಾಸಕರಾಗಿರುವ ಲಕ್ಷ್ಮಣ ಸವದಿ (Laxman Savadi) ಕೂಡ ಪಕ್ಷಕ್ಕೆ ವಾಪಸ್ ಆಗುವ ನಿರೀಕ್ಷೆ ಹೊಂದಲಾಗಿದೆ.
ಸದ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಯಲ್ಲಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತುಕತೆಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು ಸಂಜೆ ಇಬ್ಬರು ನಾಯಕರು ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಬಿಜೆಪಿಗೆ ವಾಪಸ್ ಆಗುವ ವಿಚಾರವಾಗಿ ರಾಜ್ಯ ನಾಯಕರು ಈಗಾಗಲೇ ಶೆಟ್ಟರ್ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಶೆಟ್ಟರ್ ಅವರು ಬಿಜೆಪಿ ಹೈಕಮಾಂಡ್ ಖುದ್ದು ಸಂಪರ್ಕಿಸಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಜೆಪಿಗೆ ವಾಪಸಾಗುವ ಬಗ್ಗೆ ಪಕ್ಷದಲ್ಲಿ ಮುಕ್ತ ವಾತಾವರಣ ಇರುವ ಬಗ್ಗೆ ಶೆಟ್ಟರ್ ಈಗಾಗಲೇ ಮನಗಂಡಿದ್ದಾರೆ.
ಆದರೆ, ರಾಜ್ಯ ನಾಯಕರ ಸಂಪರ್ಕಕ್ಕೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಖುದ್ದು ಬಿಜೆಪಿ ವರಿಷ್ಠರು ನೇರವಾಗಿ ತನ್ನನ್ನು ಸಂಪರ್ಕ ಮಾಡಿದರೆ ಮಾತ್ರ ಮುಂದಿನ ತೀರ್ಮಾನ ಮಾಡುವ ಲೆಕ್ಕಾಚಾರದಲ್ಲಿ ಶೆಟ್ಟರ್ ಇದ್ದಾರೆ. ಒಂದು ತಿಂಗಳ ಹಿಂದೆ ಯಡಿಯೂರಪ್ಪ ಅವರು ಶೆಟ್ಟರ್ ಆಪ್ತ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕರೆಸಿಕೊಂಡು ಮಾತುಕತೆ ನಡೆಸಿದ್ದರು.
ಜಗದೀಶ್ ಶೆಟ್ಟರ್ ಘರ್ ವಾಪ್ಸಿಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ಆದರೆ. ಸ್ಥಳೀಯ ಮಟ್ಟದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವು ನಾಯಕರು ಶೆಟ್ಟರ್ ಅವರನ್ನು ಭೇಟಿಯಾಗಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂಲಕವೂ ಮನವೋಲಿಸುವ ಪ್ರಯತ್ನ ನಡೆಸಲಾಗಿದೆ.
ಬಣಜಿಗರ ಮತ ಬ್ಯಾಂಕ್ ತಪ್ಪಿಹೋಗುವ ಆತಂಕದಲ್ಲಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಒಳಹೊಡೆತದ ಭೀತಿಯನ್ನೂ ಎದುರಿಸುತ್ತಿದೆ. ಕಳೆದ ಬಾರಿ ಗೆದ್ದ ಸ್ಥಾನಗಳನ್ನು ಮತ್ತೆ ಗೆಲ್ಲಲೇ ಬೇಕೆಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ, ಶೆಟ್ಟರ್ ಅವರನ್ನು ಕರೆತರುವ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ.
ಇದನ್ನೂ ಓದಿ: ಬಿಜೆಪಿ ನಾಯಕರು ಶೆಟ್ಟರ್ ದುಂಬಾಲು ಬಿದ್ದಿರೋದು ಆ ಪಕ್ಷ ದುರ್ಬಲಗೊಂಡಿರುವುದಕ್ಕೆ ಸಾಕ್ಷಿ: ಡಿಕೆ ಶಿವಕುಮಾರ್
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿಸಲು ಕೆಲವು ಮುಖಂಡರು ಕಲಬುರ್ಗಿಗೆ ಶೆಟ್ಟರ್ ಅವರನ್ನು ಕರೆಯಿಸಿದ್ದರೂ ಕೊನೆಯ ಕ್ಷಣದಲ್ಲಿ ಸಾಧ್ಯವಾಗಿರಲಿಲ್ಲ. ನಂತರ ಖುದ್ದು ಶೆಟ್ಟರ್ ಅವರನ್ನು ಶೋಭಾ ಕರಂದ್ಲಾಜೆ ಭೇಟಿಯಾಗಿದ್ದರು. ಮಾತುಕತೆ ವೇಳೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಸಂದೇಶವನ್ನು ಶೆಟ್ಟರ್ಗೆ ತಲುಪಿಸಿದ್ದರು.
ಇದರ ಬೆನ್ನಲ್ಲೇ ಶೆಟ್ಟರ್ ಅವರನ್ನ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದರು. ಆದರೆ ಘರ್ ವಾಪ್ಸಿ ಕುರಿತು ಶೆಟ್ಟರ್ ಯಾವುದೇ ಮಾತನ್ನಾಡಿರಲಿಲ್ಲ. ಈ ಬೆಳವಣಿಗೆಗೆ ಸ್ಥಳೀಯ ನಾಯಕರು ಅತೃಪ್ತಿ ತೋರುತ್ತಿದ್ದಾರೆ. ಪಕ್ಷ ತೊರೆದವರನ್ನು ಮತ್ತೆ ಕರೆತರೋದು ಬೇಡ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಜಿಲ್ಲೆಯ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶೆಟ್ಟರ್ ಬಿಜೆಪಿಗೆ ವಾಪಸ್ ಆಗುವುದು ನಮಗಿಷ್ಟವಿಲ್ಲ ಎಂದು ನಾಯಕರು ಹೇಳುತ್ತಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ನಿನ್ನೆ ದೆಹಲಿಗೆ ತೆರಳಿದ್ದು, ಇವರ ಬೆನ್ನಲ್ಲೇ ಶೆಟ್ಟರ್ ಕೂಡ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದರು. ಇವರೊಂದಿಗೆ ಮಾಜಿ ಸಚಿವ ಮುನೇನಕೊಪ್ಪ ಕೂಡಾ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇಂದು ಅಮಿತ್ ಶಾ ಅವರನ್ನು ಭೇಟಿಯಾಗಿ ವಾಪಸ್ ಆಗುವ ಸಾಧ್ಯತೆ ಇದೆ.
ಜಗದೀಶ್ ಶೆಟ್ಟರ್ ಬಿಜೆಪಿಗೆ ಅನಿವಾರ್ಯರಲ್ಲ. ಪಕ್ಷಕ್ಕೆ ಕರೆತರುವ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಶೆಟ್ಟರ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಶೆಟ್ಟರ್ ಅವರು ಕಲಬುರಗಿಯಲ್ಲಿ ಮೋದಿಯನ್ನ ಭೇಟಿಯಾಗಲು ಹೋಗಿದ್ದರು ಎಂಬುದು ಸತ್ಯಕ್ಕೆ ದೂರವಾಗಿದೆ ಎಂದರು.
ಶೋಭಾ ಕರಂದ್ಲಾಜೆ ಮತ್ತು ರಮೇಶ್ ಜಾರಕಿಹೊಳಿ ಶೆಟ್ಟರ್ ಜೊತೆ ಮಾತನಾಡಿದ್ದು ಶುದ್ಧ ಸುಳ್ಳು. ಅವರು ಶೆಟ್ಟರ್ ಜೊತೆಗೆ ಮಾತನಾಡಿದ್ದರೆಂದು ಹೇಳಲಾಗುತ್ತಿದೆ, ಆದರೆ ಈ ಬಗ್ಗೆ ಅವರೇ ಮಾತನಾಡಿಲ್ಲ. ನಮ್ಮ ಪಕ್ಷದಿಂದ ಶೆಟ್ಟರ್ ಅವರನ್ನ ಕರೆತರುವ ಬೆಳವಣಿಗೆ ಆಗಿಲ್ಲ. ನಮ್ಮ ಪಕ್ಷಕ್ಕೆ ಯಾರು ಅನಿವಾರ್ಯತೆ ಅಲ್ಲ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತಾರೆ. ನಾನು ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಬಿಜೆಪಿಯವರು ಹುಟ್ಟುಹಾಕಿದ ಉಹಾಪೋಹಗಳು ಅಷ್ಟೇ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಹಿರಿಯ ರಾಜಕಾರಣಿ. ಶೆಟ್ಟರ್ ವಿಚಾರ, ನಾಯಕತ್ವದಲ್ಲಿ ಬದ್ಧತೆ ಇರುವವರು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಶೆಟ್ಟರ್ ಸಹಿಸುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಅಲ್ಲಿಂದ ಕಾಂಗ್ರೆಸ್ಗೆ ಬಂದಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ