Arun Jaitley Death Anniversary: ಇಂದು ಅರುಣ್ ಜೇಟ್ಲಿ ಪುಣ್ಯತಿಥಿ; ಬಿಜೆಪಿ ಟ್ರಬಲ್ ಶೂಟರ್ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

Arun Jaitley: ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ 1991ರಿಂದಲೂ ಬಿಜೆಪಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ಖ್ಯಾತ ವಕೀಲ, ಬಿಜೆಪಿ ಹಿರಿಯ ನಾಯಕರಾಗಿದ್ದ ಅರುಣ್ ಜೇಟ್ಲಿ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ.

Arun Jaitley Death Anniversary: ಇಂದು ಅರುಣ್ ಜೇಟ್ಲಿ ಪುಣ್ಯತಿಥಿ; ಬಿಜೆಪಿ ಟ್ರಬಲ್ ಶೂಟರ್ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ
ಅರುಣ್ ಜೇಟ್ಲಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 24, 2021 | 1:53 PM

ನವದೆಹಲಿ: ಕೇಂದ್ರ ಸರ್ಕಾರದ ಮಾಜಿ ಹಣಕಾಸು ಸಚಿವ, ಬಿಜೆಪಿಯ ಟ್ರಬಲ್ ಶೂಟರ್ (BJP Trouble Shooter) ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ (Arun Jaitley) ಅನಾರೋಗ್ಯದಿಂದ ಸಾವನ್ನಪ್ಪಿ ಇಂದಿಗೆ 2 ವರ್ಷ. 2019ರ ಆಗಸ್ಟ್ 24ರಂದು ತಮ್ಮ 66ನೇ ವಯಸ್ಸಿನಲ್ಲಿ ಅರುಣ್ ಜೇಟ್ಲಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅರುಣ್ ಜೇಟ್ಲಿಯ ಪುಣ್ಯ ತಿಥಿಯಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಶ್ವಿನಿ ಯಾದವ್ ಸೇರಿದಂತೆ ಅನೇಕ ಗಣ್ಯರು ಜೇಟ್ಲಿಯನ್ನು ನೆನಪಿಸಿಕೊಂಡಿದ್ದಾರೆ. ಖ್ಯಾತ ವಕೀಲ, ಬಿಜೆಪಿ ಹಿರಿಯ ನಾಯಕರಾಗಿದ್ದ ಅರುಣ್ ಜೇಟ್ಲಿ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ.

ವಕೀಲರಾಗಿ, ರಾಜಕಾರಣಿಯಾಗಿ, ಅದ್ಭುತ ವಾಗ್ಮಿಯಾಗಿ ಹೆಸರು ಗಳಿಸಿದ್ದ ಅರುಣ್ ಜೇಟ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲಾ ಸಚಿವರಾಗಿದ್ದವರು. 1952, ಡಿಸೆಂಬರ್ 28ರಂದು ದೆಹಲಿಯಲ್ಲಿ ಜನಿಸಿದ ಅರುಣ್ ಜೇಟ್ಲಿ ಅವರ ತಂದೆ ಕಿಶನ್ ಕೂಡ ವಕೀಲರಾಗಿದ್ದರು. ತಂದೆಯಂತೆ ಅರುಣ್ ಜೇಟ್ಲಿ ಕೂಡ ವಕೀಲರಾದರು. 24 ಮೇ 1982ರ ಮೇ 24ರಂದು ಅರುಣ್ ಜೇಟ್ಲಿ ಸಂಗೀತಾ ಅವರನ್ನು ಮದುವೆಯಾದರು. ಅವರಿಗೆ ರೋಹನ್ ಹಾಗೂ ಸೊನಾಲಿ ಎಂಬ ಮಕ್ಕಳಿದ್ದಾರೆ. ಅವರ ಮಗಳು ಸೊನಾಲಿ ಜೇಟ್ಲಿ ಕೂಡ ವಕೀಲರಾಗಿದ್ದಾರೆ.

ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ 1991ರಿಂದಲೂ ಬಿಜೆಪಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ಬಿಜೆಪಿಯಿಂದಲೇ ರಾಜಕೀಯ ಜೀವನ ಆರಂಭವಿಸಿದ ಅವರು ಕೊನೆಯವರೆಗೂ ಬೇರಾವ ಪಕ್ಷಕ್ಕೂ ಹೋಗಲಿಲ್ಲ. ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲೇ ಡಿಮಾನಿಟೈಸೇಷನ್ ಜಾರಿಗೆ ಬಂದಿತು. 500, 1000 ರೂ. ನೋಟುಗಳನ್ನು ಬ್ಯಾನ್ ಮಾಡಿದ್ದು ಇವರ ಅವಧಿಯಲ್ಲೇ. ಇವರ ಅವಧಿಯಲ್ಲಿ ಜಾರಿಗೆ ತಂದ ಜಿಎಸ್​ಟಿ ಕಾಯ್ದೆ ಕೂಡ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ, ಅದಕ್ಕೆ ಬಂದ ಎಲ್ಲ ವಿರೋಧಗಳನ್ನೂ ಅರುಣ್ ಜೇಟ್ಲಿ ಎದುರಿಸಿದರು.

ಅರುಣ್ ಜೇಟ್ಲಿ ಅವರ ನೆನಪಿಗಾಗಿ 2019ರ ಸೆಪ್ಟೆಂಬರ್ 12ರಂದು ದೆಹಲಿಯ ಫಿರೋಜ್ ಶಾ ಕೋಟ್ಲ ಸ್ಟೇಡಿಯಂಗೆ ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಯಿತು. ಆ ಸ್ಟೇಡಿಯಂನಲ್ಲಿ ಅರುಣ್ ಜೇಟ್ಲಿ ಅವರ ಪ್ರತಿಮೆ ಕೂಡ ನಿರ್ಮಿಸಲಾಗಿದೆ. ಅರುಣ್ ಜೇಟ್ಲಿ ಅವರಿಗೆ 2020ರಲ್ಲಿ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

1974ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು. 70ರ ದಶಕದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಖಿಲ ಎ‌ಬಿವಿಪಿ ನಾಯಕರಾಗಿದ್ದ ಅರುಣ್ ಜೇಟ್ಲಿ, 1974ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ 19 ತಿಂಗಳುಗಳ ಕಾಲ ಸೆರೆವಾಸವನ್ನೂ ಅನುಭವಿಸಿದ್ದರು. ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘ ಸೇರ್ಪಡೆಯಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು.

1977ರಿಂದ ದೇಶದ ಹಲವಾರು ಹೈಕೋರ್ಟ್‌ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ವಕೀಲರಾಗಿ ಕೆಲಸ ಮಾಡಿದ್ದ ಜೇಟ್ಲಿ ಅವರನ್ನು 1989ರ ವಿ.ಪಿ. ಸಿಂಗ್ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಯಿತು. ಬೋಫೋರ್ಸ್ ಹಗರಣ ಪ್ರಕರಣದಲ್ಲಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸುವ, ಕಾಗದ ವ್ಯವಹಾರಗಳನ್ನು ನೋಡಿಕೊಳ್ಳುವ ಕೆಲಸವನ್ನು ಜೇಟ್ಲಿ ಸಮರ್ಥವಾಗಿ ನಿರ್ವಹಿಸಿದ್ದರು. ವಕೀಲರಾಗಿದ್ದ ಅರುಣ್ ಜೇಟ್ಲಿ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್, ಜನತಾದಳ ಮುಂತಾದ ಇತರೆ ಪಕ್ಷಗಳ ನಾಯಕರ ಪರವಾಗಿಯೂ ವಾದ ಮಂಡಿಸಿದ್ದರು ಎಂಬುದು ಗಮನಾರ್ಹ. ಎಲ್​.ಕೆ. ಅಡ್ವಾನಿ ಅವರ ಕೇಸ್ ಅರುಣ್ ಜೇಟ್ಲಿ ವಾದ ಮಂಡಿಸಿದ ಪ್ರಮುಖ ಪ್ರಕರಣಗಳಲ್ಲಿ ಒಂದು.

ಎನ್‌ಡಿಎ ಒಕ್ಕೂಟದಡಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, 1999ರಲ್ಲಿ ಅರುಣ್ ಜೇಟ್ಲಿ ಮಾಹಿತಿ ಹಾಗೂ ಪ್ರಸಾರದ ರಾಜ್ಯ ಸಚಿವರಾಗಿ ನೇಮಕವಾದರು. ರಾಮ್ ಜೇಠ್ಮಲಾನಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅರುಣ್ ಜೇಟ್ಲಿ 2000ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆಯ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡರು. ಜನವರಿ 2003ರಲ್ಲಿ ಮತ್ತೊಮ್ಮೆ ಕೇಂದ್ರ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಕಾನೂನು ಮತ್ತು ನ್ಯಾಯಾಂಗ ಖಾತೆಯನ್ನು ವಹಿಸಿಕೊಂಡರು. ಮೇ 2004ರಲ್ಲಿ ಎನ್‍ಡಿಎ ಸೋತಾಗ ಅರುಣ್ ಜೇಟ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದರು.

ಅರುಣ್ ಜೇಟ್ಲಿ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಮುಂದಿನ ಬಾರಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬಿಜೆಪಿ ಭಾರಿ ಬಹುಮತದಿಂದ ಗೆದ್ದ ಬಳಿಕ ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಬೇಡಿ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆರನೇ ಹಾಗೂ ಕೊನೆ ಬಜೆಟ್‌ ಮಂಡಿಸಲು ಸಜ್ಜಾಗಿದ್ದ ಅರುಣ್ ಜೇಟ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಿಢೀರನೆ ಅಮೆರಿಕಕ್ಕೆ ತೆರಳಿದ್ದರಿಂದ ಪಿಯೂಷ್ ಗೋಯಲ್ ಆ ಬಾರಿ ಬಜೆಟ್ ಮಂಡಿಸಿದ್ದರು.

ಇದನ್ನೂ ಓದಿ: ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವಿಗೆ ನರೇಂದ್ರ ಮೋದಿಯವರ ಕಿರುಕುಳವೇ ಕಾರಣ: ಸ್ಟಾಲಿನ್ ಪುತ್ರ ಉದಯನಿಧಿ

ಪ್ರಧಾನಿ ಮೋದಿ ಭೇಟಿಗಾಗಿ 900 ಕಿಮೀ ಕಾಲ್ನಡಿಗೆ ಸಂಚಾರ ಶುರು ಮಾಡಿದ ಯುವಕ; ಮೋದಿ ಸಿಕ್ಕರೆ ಅದೊಂದು ವಿಷಯ ಹೇಳಬೇಕಂತೆ !

(Arun Jaitley Death Anniversary some major achievements and Life Story of the BJP Trouble Shooter Arun Jaitley)

Published On - 1:47 pm, Tue, 24 August 21