ಕೆಲವೇ ಕ್ಷಣಗಳಲ್ಲಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ, ಬಿರುಸುಗೊಂಡ ಶಾಸಕ ಅರವಿಂದ ಬೆಲ್ಲದ್​ ಚಟುವಟಿಕೆ

Arvind Bellad: ಅರುಣ್ ಸಿಂಗ್ ಭೇಟಿಗಾಗಿ ಅಪಾಯಿಂಟ್​ಮೆಂಟ್ ಪಡೆಯಲು ಅವರು ಬಿಜೆಪಿ ಕಚೇರಿಗೆ ಬಂದಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮೊಂದಿಗಿರುವ ಶಾಸಕರ ಅಭಿಪ್ರಾಯವನ್ನು ಸಲ್ಲಿಸುವ ಉದ್ದೇಶ ಹೊಂದಿದ್ದಾರೆ. ಅರುಣ್ ಸಿಂಗ್ ಭೇಟಿಗೆ ಈಗಾಗಲೇ 35ಕ್ಕೂ ಹೆಚ್ಚು ಶಾಸಕರಿಗೆ ಅನುಮತಿ ದೊರೆತಿದೆ ಎಂದು ತಿಳಿದುಬಂದಿದೆ.

ಕೆಲವೇ ಕ್ಷಣಗಳಲ್ಲಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ, ಬಿರುಸುಗೊಂಡ ಶಾಸಕ ಅರವಿಂದ ಬೆಲ್ಲದ್​ ಚಟುವಟಿಕೆ
ಶಾಸಕ ಅರವಿಂದ ಬೆಲ್ಲದ್​

ಬೆಂಗಳೂರು: ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಆದರೆ ಅದಕ್ಕೂ ಮುನ್ನ ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿರುವ ಒಂದಷ್ಟು ಅತೃಪ್ತ ಶಾಸಕರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಅದಾಗಲೇ ಆಗಮಿಸಿದ್ದು, ಉಸ್ತುವಾರಿ ಅರುಣ್​ ಸಿಂಗ್​ ಅವರು ತಮ್ಮ ಅಹವಾಲನ್ನು ಬೇಕು ಎಂದು ಪಟ್ಟುಹಿಡಿದಿದ್ದಾರೆ.

ರಾಜ್ಯದ ಆಡಳಿತಾರೂಢ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಷಯವಾಗಿ ಬಂಡಾಯದ ಬಾವುಟ ಬೀಸಿರುವ ಪ್ರಮುಖರು ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್​ ಗುರುತಿಸಿಕೊಂಡಿದ್ದಾರೆ. ಅವರು ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸುವ ಹೊತ್ತಿನಲ್ಲಿ ಈಗಾಗಲೇ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಅರುಣ್ ಸಿಂಗ್ ಭೇಟಿಗಾಗಿ ಅಪಾಯಿಂಟ್​ಮೆಂಟ್ ಪಡೆಯಲು ಅವರು ಬಿಜೆಪಿ ಕಚೇರಿಗೆ ಬಂದಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮೊಂದಿಗಿರುವ ಶಾಸಕರ ಅಭಿಪ್ರಾಯವನ್ನು ಸಲ್ಲಿಸುವ ಉದ್ದೇಶ ಹೊಂದಿದ್ದಾರೆ. ಅರುಣ್ ಸಿಂಗ್ ಭೇಟಿಗೆ ಈಗಾಗಲೇ 35ಕ್ಕೂ ಹೆಚ್ಚು ಶಾಸಕರಿಗೆ ಅನುಮತಿ ದೊರೆತಿದೆ ಎಂದು ತಿಳಿದುಬಂದಿದೆ.

ದೆಹಲಿ ವಿಮಾನ ನಿಲ್ದಾಣದಿಂದ ಹೊರಟ ಅರುಣ್ ಸಿಂಗ್​:
ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಬೆಂಗಳೂರು ಭೇಟಿ ಕಾರ್ಯಕ್ರಮದ ನಿಮಿತ್ತ ದೆಹಲಿಯಿಂದ ಇದೀಗತಾನೆ ಹೊರಟಿದ್ದಾರೆ. ದೆಹಲಿಯಲ್ಲಿರುವ ತಮ್ಮ ಜಿಆರ್​ಜಿ ನಂಬರ್ 6 ನಿವಾಸದಿಂದ ಹೊರಟ ಅರುಣ್​ ಸಿಂಗ್​, ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರು ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

ನಳಿನ್ ಕುಮಾರ್ ಕಟೀಲ್ ಜೊತೆ ಬಿಜೆಪಿ ಕಚೇರಿಯಲ್ಲಿ ಬೆಲ್ಲದ್ ಬಿಸಿಬಿಸಿ ಚರ್ಚೆ:
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬರುವ ಅರ್ಧಗಂಟೆ ಮುಂಚೆಯೇ ಬಿಜೆಪಿ ಕಚೇರಿಗೆ ಬಂದಿರುವ ಅರವಿಂದ್ ಬೆಲ್ಲದ್ ಇದೀಗ ಕಟೀಲ್​ ಜೊತೆ ಬಿಸಿಬಿಸಿ ಮಾತುಕತೆ ನಡೆಸಿದ್ದಾರೆ. ದೆಹಲಿ ಭೇಟಿಯ ಬಗ್ಗೆ ಬೆಲ್ಲದ್ ರಿಂದ ಕಟೀಲ್ ಸಂಪೂರ್ಣ ಮಾಹಿತಿ ಪಡೆಯುವ ಸಾಧ್ಯತೆಯಿದೆ. ನಿನ್ನೆಯೂ ಹೀಗೆಯೇ ಶಾಸಕ ಅರವಿಂದ ಬೆಲ್ಲದ್​ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ.. ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೇ ಇಲ್ಲ. ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದಿರುವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ಉಸ್ತುವಾರಿ ನಾಯಕ ಅರುಣ್ ಸಿಂಗ್ ಇಂದು ಸಂಜೆ ಸಚಿವರ ಜೊತೆ ಮಾತುಕತೆ ನಡೆಸಲಿದ್ದಾರೆ. ಯಾರಾದರೂ ಅವರೊಂದಿಗ ಮಾತನಾಡಲು ಬಯಸಿದ್ರೆ ಅವಕಾಶ ಕೊಡಬಹುದು ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.

ಸಚಿವ ಸ್ಥಾನ ನೀಡುವಂತೆಯೂ ಕೆಲವು ಶಾಸಕರು ಬೇಡಿಕೆ ಸಲ್ಲಿಸಲಿದ್ದಾರೆ
ಬಿಜೆಪಿ ರಾಜ್ಯ ಉಸ್ತುವಾರಿ ಜತೆ ಶಾಸಕರ ಸಭೆ ವಿಚಾರವಾಗಿ ಕೇವಲ ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಶಾಸಕರು ಪರ-ವಿರೋಧ ಮಾತ್ರ ಪ್ರಸ್ತಾಪ ಮಾಡುತ್ತಿಲ್ಲ. ಸಚಿವ ಸ್ಥಾನ ನೀಡುವಂತೆಯೂ ಕೆಲವು ಶಾಸಕರು ಬೇಡಿಕೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಜಿಲ್ಲೆಗೆ ಸಚಿವ ಸ್ಥಾನದ‌ ಮೂಲಕ ಆದ್ಯತೆಗೆ ಬೇಡಿಕೆ ಇಡಲಿದ್ದಾರೆ. ಇನ್ನು ಕೆಲವು ಶಾಸಕರಿಂದ ಕ್ಷೇತ್ರಕ್ಕೆ ಅನುದಾನದ ಬಗ್ಗೆ ಬೇಡಿಕೆ ಮಂಡನೆಯಾಗಲಿದೆಯಂತೆ. ಹೀಗೆ ನಾಳೆ ಅರುಣ್ ಸಿಂಗ್ ಅವರ ಬಳಿ ಹತ್ತು ಹಲವು ರೀತಿಯ ಬೇಡಿಕೆಗಳನ್ನು ಈ ಶಾಸಕರು ಮಂಡಿಸಲಿದ್ದಾರೆ ಎನ್ನಲಾಗಿದೆ.

ಅರುಣ್ ಸಿಂಗ್​ರನ್ನು ಭೇಟಿಯಾಗಿ ಯಾರು ಬೇಕಾದರೂ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಬಹುದು:
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸುತ್ತಮುತ್ತ ಇರುವವರು ಇಲಾಖೆಗಳಲ್ಲಿ ಮೂಗು ತೂರಿಸ್ತಿದ್ದಾರೆನ್ನುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ಇದೇ ವೇಳೆ ಹೇಳಿದ್ದಾರೆ. ಯಾರಿಗಾದರೂ ಹೀಗೆ ಅನಿಸಿದರೆ ಮುಕ್ತವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಅವರನ್ನು ಭೇಟಿಯಾಗಿ ಹೇಳಬಹುದು. ನಾಳೆ ಸಂಜೆಯವರೆಗೂ ಸಿಎಂ, ಅರುಣ್ ಸಿಂಗ್​ ಜತೆಯಲ್ಲಿರುತ್ತಾರೆ. ಯಾರು ಬೇಕಾದರೂ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳಬಹುದು. ಆದರೆ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಅರುಣ್ ಸಿಂಗ್​ ಬಂದ ನಂತರ ಸಮಸ್ಯೆ ಬಗೆಹರಿಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

(arvind bellad to meet karnataka bjp in charge arun singh visit to bengaluru)