ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ; ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಬಾಳಾಸಾಹೇಬ್ ಥೋರಟ್ ರಾಜೀನಾಮೆ

ಇದಕ್ಕೆ ಪ್ರತಿಕ್ರಿಯಿಸಿ ನಾನಾ ಪಟೋಲೆ "ಇಂತಹ ಕೊಳಕು ರಾಜಕೀಯ" ದಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ ಎಂದಿದ್ದಾರೆ. ಅಂತಹ ಯಾವುದೇ ಪತ್ರವನ್ನು ಬರೆದಿಲ್ಲ ಎಂದು ಅವರು ಈ ಹಿಂದೆಯೂ ಹೇಳಿದ್ದರು. ಈ ಪತ್ರದ ವಿಷಯಗಳು ತಿಳಿದಿದ್ದರೆ ಮಾತ್ರ ನಾನು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ ಅವರು.

ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ; ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ  ಬಾಳಾಸಾಹೇಬ್ ಥೋರಟ್ ರಾಜೀನಾಮೆ
ಬಾಳಾಸಾಹೇಬ್ ಥೋರಟ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 07, 2023 | 2:40 PM

ಮುಂಬೈ: ಮಹಾರಾಷ್ಟ್ರ (maharashtra) ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆಗೆ ನನ್ನ ಮೇಲೆ ಕೋಪವಿದೆ. ಹಾಗಾಗಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿದ ಒಂದು ದಿನದ ನಂತರ ಕಾಂಗ್ರೆಸ್ ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ (Balasaheb Thorat) ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ನಿಲುವಿನಲ್ಲಿ ದೃಢವಾಗಿದ್ದು, ತಮ್ಮ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ನಾನಾ ಪಟೋಲೆ ಅವರೊಂದಿಗೆ ಕೆಲಸ ಮಾಡುವುದು ಕಷ್ಟಕರವಾಗುತ್ತಿದೆ ಎಂದು ಹೇಳಿ ಫೆಬ್ರವರಿ 2 ರಂದು ಥೋರಟ್ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಹಿರಿಯ ನಾಯಕರಾಗಿದ್ದರೂ, ಅವರ ವಿರುದ್ಧ ಮತ್ತು ಅವರ ಕುಟುಂಬದ ವಿರುದ್ಧ ಹೇಳಿಕೆಗಳನ್ನು ನೀಡಲಾಗುತ್ತಿದೆ. ಕೆಲವರು ಥೋರಟ್ ಮತ್ತು ಅವರ ಕುಟುಂಬದ ಹೆಸರನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಪಟೋಲೆ ಅವರು ‘ಅಹಂಕಾರಿ’ ಎಂದು ಥೋರಟ್ ಹೇಳಿರುವುದಾಗಿ ಮೂಲಗಳು ಹೇಳಿವೆ.

ಇದಕ್ಕೆ ಪ್ರತಿಕ್ರಿಯಿಸಿ ನಾನಾ ಪಟೋಲೆ “ಇಂತಹ ಕೊಳಕು ರಾಜಕೀಯ” ದಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ ಎಂದಿದ್ದಾರೆ. ಅಂತಹ ಯಾವುದೇ ಪತ್ರವನ್ನು ಬರೆದಿಲ್ಲ ಎಂದು ಅವರು ಈ ಹಿಂದೆಯೂ ಹೇಳಿದ್ದರು. ಈ ಪತ್ರದ ವಿಷಯಗಳು ತಿಳಿದಿದ್ದರೆ ಮಾತ್ರ ನಾನು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ ಅವರು.

ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಮ್ಮೊಂದಿಗೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಮಾಜಿ ರಾಜ್ಯ ಘಟಕದ ಮುಖ್ಯಸ್ಥ ಮತ್ತು ಸಚಿವ ಬಾಳಾಸಾಹೇಬ್ ಥೋರಟ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ:ನಾವು ಯಾರ ಬಿ ಟೀಮ್ ಅಲ್ಲ, ನಾವು ಯಾರ ಮುಂದೆಯೂ ತಲೆಬಾಗಲ್ಲ: ಅಮಿತ್ ಶಾಗೆ ತಿಪ್ರಾ ಮೋಥಾ ಮುಖ್ಯಸ್ಥರ ಪ್ರತಿಕ್ರಿಯೆ

ಬಾಳಾಸಾಹೇಬ್ ಥೋರಟ್ ಅವರ ಸೋದರ ಮಾವ ಆಗಿರುವ ನಾಸಿಕ್ ಪದವೀಧರ ಕ್ಷೇತ್ರದ ಎಂಎಲ್‌ಸಿ ಸುಧೀರ್ ತಾಂಬೆ ಅವರು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದರೂ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕೆಲವು ದಿನಗಳ ನಂತರ ಇದು ಬಂದಿದೆ. ಅವರು ತಮ್ಮ ಮಗ ಸತ್ಯಜಿತ್ ತಾಂಬೆಯನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ.

ಎಂಎಲ್‌ಸಿ ಚುನಾವಣೆಯಲ್ಲಿನ ನಿಲುವಿಗಾಗಿ ಕಾಂಗ್ರೆಸ್ ಸುಧೀರ್ ತಾಂಬೆ ಮತ್ತು ಸತ್ಯಜಿತ್ ತಾಂಬೆ ಅವರನ್ನು ಪಕ್ಷ  ಅಮಾನತುಗೊಳಿಸಿದೆ. ಚುನಾವಣಾ ಸಮಯದಲ್ಲಿನ ರಾಜಕೀಯವು ತನಗೆ ತೊಂದರೆ ನೀಡಲಿದೆ ಎಂದು ಥೋರಟ್ ಹೇಳಿದ್ದು ತಮ್ಮ ಭಾವನೆಗಳನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ವಿಧಾನಪರಿಷತ್‌ಗೆ ಚುನಾವಣೆ ನಡೆದಿದ್ದು, ಅದರಲ್ಲಿ ಸಾಕಷ್ಟು ರಾಜಕೀಯ ನಡೆದಿದೆ. ಸತ್ಯಜಿತ್ ಅವರು ಉತ್ತಮ ಮತಗಳಿಂದ ಗೆದ್ದಿದ್ದಾರೆ, ನಾವೂ ಅವರನ್ನು ಅಭಿನಂದಿಸಬೇಕು. ಆದರೆ ನಡೆದ ರಾಜಕೀಯ ನನ್ನನ್ನ ಡಿಸ್ಟರ್ಬ್ ಮಾಡುತ್ತೆ ಅನ್ನೋದು ಸತ್ಯ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ನನ್ನ ಭಾವನೆಯನ್ನು ತಿಳಿಸಿದ್ದೇನೆ. ಇದು ಪಕ್ಷದೊಳಗಿನ ರಾಜಕೀಯ, ಇದನ್ನು ಹೊರಗೆ ಚರ್ಚೆ ಮಾಡಬಾರದು, ನನ್ನ ನಂಬಿಕೆ. ಹಾಗಾಗಿ ಈ ವಿಚಾರದಲ್ಲಿ ಏನಾಗಿದೆ ಎಂದು ಹೈಕಮಾಂಡ್‌ಗೆ ಹೇಳಿದ್ದೇನೆ ಎಂದಿದ್ದಾರೆ ಥೋರಟ್. ರಾಜ್ಯ ಪಕ್ಷದ ನಾಯಕತ್ವ ನನ್ನನ್ನು ಅವಮಾನಿಸಿದೆ. ತಾಂಬೆ ವಿಷಯದಲ್ಲಿ ಅವರ ಕುಟುಂಬದ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬಾಳಾಸಾಹೇಬ್ ಥೋರಟ್ ಅವರ ಸಹಾಯಕರು ಪತ್ರವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಅಹಮದ್‌ನಗರದ ಕೆಲವು ಕಾರ್ಯಕರ್ತರನ್ನು ಈ ವಿಚಾರವಾಗಿ ಶಿಕ್ಷಿಸಲಾಗಿದೆ ಎಂದು ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ