ಪ್ರಜಧ್ವನಿ ಯಾತ್ರೆಯಲ್ಲಿ ಅಡ್ಡಗೆರೆ ಹಸ್ತ ಬಳಕೆ, ಅದೃಷ್ಟಕ್ಕಾಗಿ ಪಕ್ಷದ ಚಿಹ್ನೆಯನ್ನೇ ಬದಲಿಸಿದ್ರಾ ಡಿಕೆಶಿ? ಹೊಸ ರೇಖೆ ಹಿಂದಿರುವ ನಂಬಿಕೆ ಏನು?
ಡಿಕೆ ಶಿವಕುಮಾರ್ ಪ್ರಜಾಧ್ವನಿ ಯಾತ್ರೆಯಲ್ಲಿ ಬಳಸಲಾಗಿರುವ ಕಾಂಗ್ರೆಸ್ ಹಸ್ತದ ಗುರುತಿನಲ್ಲಿ ಕೊಂಚ ಬದಲಾವಣೆ ಕಂಡುಬಂದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅದೃಷ್ಟದ ಮೊರೆ ಹೋದ್ರಾ? ತಮ್ಮ ರಾಜಕೀಯ ಒಳಿತಿಗಾಗಿ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಈ ರೀತಿ ಬದಲಾವಣೆ ಮಾಡಿಸಿದ್ದರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಬೆಂಗಳೂರು: 1980 ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಚಿಹ್ನೆಯಾಗಿ ಹಸ್ತದ ಗುರುತನ್ನು (Congress Logo) ರಚನೆ ಮಾಡಿ ಚಾಲ್ತಿಗೆ ತರಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರೂ ಕೂಡ ಹಸ್ತದ ಗುರುತನ್ನು ಬದಲು ಮಾಡಲು ಮುಂದಾಗಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ತಮ್ಮ ಅದೃಷ್ಟದ ಕಾರಣಕ್ಕೆ ಹಸ್ತದ ಗುರುತಿನಲ್ಲಿ ರೇಖೆಯನ್ನೇ ಬದಲಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು…ಡಿ.ಕೆ. ಶಿವಕುಮಾರ್ ಅವರು ಪ್ರಜಾಧ್ವನಿ ಯಾತ್ರೆಯಲ್ಲಿ(praja dhwani yatra) ಬಳಸಿರುವ ಕಾಂಗ್ರೆಸ್ನ ಹಸ್ತದಲ್ಲಿ ಗುರುತಿನಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ. ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ತಲುಪುತ್ತದೆ. ಇದನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹಸ್ತದಲ್ಲಿ ರೇಖೆ ಬದಲಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಇದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Fact Check: ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ವೈರಲ್, ಇಲ್ಲಿದೆ ಸತ್ಯಾಸತ್ಯತೆ
ಕಾಂಗ್ರೆಸ್ ಸಿಂಬಲ್ ಹಸ್ತದ ಗುರುತು ಆಗಿತ್ತು, ಆ ಹಸ್ತದ ಗುರುತಿನಲ್ಲಿ ಮೂರು ಗೆರೆಗಳಿದ್ದವು. ಮೂರು ಗೆರೆಗಳು ಸರಿಯಲ್ಲ ಎಂದು ಸಂಖ್ಯಾಶಾಸ್ತ್ರಜ್ಙರ ಸಲಹೆ ನೀಡಿದ್ದು, ಸಮ ಸಂಖ್ಯೆ ಗೆರೆಗಳನ್ನ ಬಳಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಸಂಖ್ಯಾಶಾಸ್ತ್ರಜ್ಙರ ಸಲಹೆಯ ಮೇರೆಗೆ ಗೆರೆಗಳು ಚೇಂಜ್ ಆಗಿದ್ದು, ಮೂರು ಗೆರೆಗಳ ಮಧ್ಯೆ ಅಡ್ಡ ಗೆರೆ ಎಳೆದ ಸಿಂಬಲ್ ಬಳಕೆ ಮಾಡಿದ್ದಾರೆ. ಡಿಕೆಶಿ ಪ್ರಜಾಧ್ವನಿ ಯಾತ್ರೆಯಲ್ಲಿ ಹೊಸ ಗೆರೆ ಹಸ್ತ ಬಳಕೆ ಮಾಡಿದ್ದಾರೆ.
ಹಸ್ತಕ್ಕೆ ನಾಲ್ಕನೆ ಗೆರೆಯು ಅದೃಷ್ಟ ಮತ್ತು ಲಕ್ಷ್ಮೀ ,ಲಕ್ಕಿ ಎಂಬುದನ್ನು ಸೂಚನೆ ನೀಡಲಿದೆ. ಸದ್ಯ ಡಿಕೆಶಿ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಈ ಚಿಹ್ನೆ ಬಳಕೆಯಾಗುತ್ತಿದೆ. ಇತ್ತ ಸಿದ್ದರಾಮಯ್ಯ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಹಳೆಯ ಹಸ್ತದ ಗುರುತನ್ನೇ ಬಳಸಲಾಗುತ್ತಿದೆ. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅದೃಷ್ಟದ ಮೊರೆ ಹೋದ್ರಾ? ಅದೃಷ್ಟಕ್ಕಾಗಿ ಡಿಕೆಶಿ ಹಸ್ತದ ರೇಖೆಯನ್ನೇ ಬದಲಿಸಿದ್ರಾ? ಅಥವಾ ಡಿಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಒಳಿತಿಗಾಗಿ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಈ ರೀತಿ ಬದಲಾವಣೆ ಮಾಡಿಸಿದ್ದರಾ? ಅಂತೆಲ್ಲಾ ಪ್ರಶ್ನೆಗಳು ಉದ್ಭವಿಸಿವೆ.
ಅಧಿಕೃತ ಚಿಹ್ನೆಯಲ್ಲಿ ಹೆಚ್ಚುವರಿ ಅಡ್ಡಗೆರೆ ಇಲ್ಲ. ಹಾಗಾಗಿ ಪಕ್ಷದ ಅಧಿಕೃತ ಚಿಹ್ನೆಯನ್ನು ಬದಲಾಯಿಸಲು ಬರುವುದಿಲ್ಲ. ಒಂದು ವೇಳೆ ಚಿಹ್ನೆಯಲ್ಲಿ ಬದಲಾವಣೆ ಮಾಡಬೇಕಾದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು ಎನ್ನುವುದು ನಿಯಮ ಇದೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಏನು ಹೇಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 3:12 pm, Tue, 7 February 23




