ಕೆಲವರು ಸುಮ್ಮನೆ ಕೂರದೆ ನನ್ನದು ಒಂದು ಎಲ್ಲಿ ಇಡಲಿ ಅಂತಾ ಬರುತ್ತಾರೆ: ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣದಲ್ಲಿ ನಮ್ಮದೂ ಪಾಲಿದೆ ಎಂದ ಸಿದ್ದರಾಮಯ್ಯ ವಿರುದ್ಧ ಹಾವೇರಿಯಲ್ಲಿ ವಾಗ್ದಾಳಿ ನಡೆಸಿದ ಸಿಟಿ ರವಿ, ಕೆಲವರು ಸುಮ್ಮನೆ ಕೂರದೆ ನನ್ನದು ಒಂದು ಎಲ್ಲಿ ಇಡಲಿ ಅಂತಾ ಬರುತ್ತಾರೆ ಎಂದಿದ್ದಾರೆ.

ಹಾವೇರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ (Bengaluru-Mysuru Expressway) ಹಣ ನೀಡಿದವರು. ಆದರೆ ಸಿದ್ದರಾಮಯ್ಯ ಅವರು ನಾಚಿಕೆ ಮಾನ ಮರ್ಯಾದೆ ಬಿಟ್ಟು ಇದು ನನ್ನ ಕಾಲದಲ್ಲಿ ಆಗಿದ್ದು ಅಂತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮರ್ಯಾದೆ ಇದ್ದವರು ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುತ್ತಾರೆ. ಕೆಲವರು ಸುಮ್ಮನೆ ಕೂರದೆ ನನ್ನದು ಒಂದು ಎಲ್ಲಿ ಇಡಲಿ ಅಂತ ಬರುತ್ತಾರೆ. ಕಾಂಗ್ರೆಸ್ ನಾಯಕರಿಂದ ರಾಜ್ಯದ ಜನರಿಗೆ ಹೂ ಇಡುವ ಕೆಲಸ ಆಗಿದೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಲ್ಪ ದಿನ ಬಿಟ್ಟರೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ನಾವೇ ಅನ್ನುತ್ತಾರೆ. ಸ್ವಲ್ಪ ದಿನ ಹೋದರೆ ಅನುಭವ ಮಂಟಪಕ್ಕೆ ಹಣ ನೀಡಿದ್ದು ನಾವೇ ಅಂತಾರೆ. ಅನುಭವ ಮಂಟಪ ಮರು ಅಭಿವೃದ್ಧಿಗೆ ಕಾಂಗ್ರೆಸ್ ಯೋಚಿಸಿರಲಿಲ್ಲ. ಕಾಂಗ್ರೆಸ್ ನಾಯಕರಿಗೆ ಟಿಪ್ಪು ಜಯಂತಿ ಆಚರಿಸಲು ಮಾತ್ರ ಆಸಕ್ತಿ ಇತ್ತು ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿ ವಿಚಾರವಾಗಿ ಮಾತನಾಡಿದ ಅವರು, 29 ರೂಪಾಯಿ ಕೇಂದ್ರ ಸರ್ಕಾರ ಕೊಡುತ್ತದೆ, 3 ರೂಪಾಯಿ ಕರ್ನಾಟಕ ಸರ್ಕಾರ ಕೊಡುತ್ತದೆ. 29 ಜಾಸ್ತಿನಾ? 3 ರೂಪಾಯಿ ಜಾಸ್ತಿನಾ? ಹಾಗಾದರೆ ಇದು ಯಾರ ಯೋಜನೆ ಎಂದು ಪ್ರಶ್ನಿಸಿದ ಸಿಟಿ ರವಿ, ಕೇಂದ್ರ ಸರ್ಕಾರದ ಹಣದಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡಿದ್ದರು. ಯಾರದ್ದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದರು ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ಟೈಟಲ್ ನೊಂದಾಯಿಸಿದ ಮುನಿರತ್ನ: ಚಿತ್ರಕತೆ ಸಿಟಿ ರವಿಯದ್ದಾ? ಎಂದ ಎಚ್ಡಿಕೆ
ಬಾಂಬ್ ಇಡುವ ಮುಸ್ಲಿಂಮರು ನಮಗೆ ಬೇಡ: ಸಿಟಿ ರವಿ
ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಮುಸ್ಲಿಂರಲ್ಲೂ ಒಳ್ಳೆಯವರಿದ್ದಾರೆ. ಆದರೆ ಬಾಂಬ್ ಇಡುವ ಮುಸ್ಲಿಂಮರು ನಮಗೆ ಬೇಡ ಎಂದು ಹೇಳಿದ ಸಿ.ಟಿ.ರವಿ, ಸಂತ ಶಿಶುನಾಳ ಷರೀಫ್ ಅಂಥವರನ್ನು ಕರೆದು ಪೂಜೆ ಮಾಡುತ್ತೇವೆ. ನೀವು ಇಬ್ರಾಹಿಂ ಸುತಾರ, ಶಿಶುನಾಳ ಷರೀಫ್, ಅಬ್ದುಲ್ ಕಲಾಂ, ಅಬ್ದುಲ್ ಹಮೀದ್ ಆಗಿ ಬಂದರೇ ತಲೆ ಮೇಲೆ ಹೊತ್ತು ಕುಣಿಯುತ್ತೇವೆ. ದಾವೂದ್ ಇಬ್ರಾಹಿಂ, ಬಿನ್ ಲಾಡೆನ್, ಕುಕ್ಕರ್ ಬಾಂಬ್ ಹಾಕುವವರು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಮಾಡಿದವರೆಲ್ಲರೂ ಡಿಕೆ ಸಹೋದರರು ಎಂದು ಇತ್ತೀಚೆಗೆ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಪರ ಹೇಳಿಕೆ ನೀಡಿದ್ದ ಡಿ.ಕೆ.ಶಿವಕುಮಾರ್ಗೆ ಟಾಂಗ್ ಕೊಟ್ಟರು.
ಭಾರತ ತುಕಡೆ ಮಾಡಲು ಒಳಸಂಚಿನ ಮೂಲಕ ಪಿಎಫ್ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್
ಪಿಎಫ್ಐ, ಎಸ್ಡಿಪಿಐ ಗ್ಯಾಂಗ್ಗೆ ಬೆಂಬಲ ಕೊಟ್ಟ ಕಾಂಗ್ರೆಸ್, ಭಾರತ ತುಕಡೆ ಮಾಡಲು ಒಳಸಂಚಿನ ಮೂಲಕ ಬೆಂಬಲ ಕೊಟ್ಟಿತ್ತು ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ಹರಿಹಾಯ್ದರು. ಕಾಂಗ್ರೆಸ್ ಪಕ್ಷ ಎಸ್ಡಿಪಿಐ ಮತ್ತು ಪಿಎಫ್ಐಗೆ ಬೆಂಬಲ ನೀಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಜೆ.ಹಳ್ಳಿ ಗ್ಯಾಂಗ್ ಮತ್ತೆ ಎದ್ದು ಕೂರುತ್ತದೆ. ಇದು ಗ್ಯಾರಂಟಿ. ಮಾತ್ರವಲ್ಲದೆ, ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಲವ್ ಜಿಹಾದ್ ಪ್ರಕರಣ ನಡೆಯುತ್ತವೆ. ಪುಣ್ಯಾತ್ಮ (ಡಿಕೆ ಶಿವಕುಮಾರ್) ಕಪಾಲಿ ಬೆಟ್ಟವನ್ನೇ ಮತಾಂತರ ಮಾಡಲು ಹೊರಟಿದ್ದ ಎಂದು ಕಿಡಿಕಾರಿದರು.
ಕಪಾಲಿ ಬೆಟ್ಟವನ್ನೇ ಮತಾಂತರ ಮಾಡಲು ಹೊರಟಿದ್ದಕ್ಕೆ ಡಿಕೆ ಶಿವಕುಮಾರ್ ಅವರಿಗೆ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಮತಾಂತರ ನಿಷೇಧ ಕಾನೂನು ರದ್ದುಗೊಂಡರೆ ಹಿಂದೂಗಳು ಕುಂಕುಮ, ವಿಭೂತಿ ಹಚ್ಚಲೂ ಸಮಸ್ಯೆ ಆಗಲಿದೆ ಎಂದರು.
ನಮ್ಮ ಊರಿನಲ್ಲಿ ವಿದ್ಯುತ್ ಇಲ್ಲ ಅಂತಾ ಡಿಕೆ ಶಿವಕುಮಾರ್ಗೆ ಒಬ್ಬ ಕರೆ ಮಾಡಿದ್ದ. ಅಂದು ಇಂಧನ ಸಚಿವರಾಗಿ ಕರೆಂಟ್ ಕೊಡುವ ಕೆಲಸ ಮಾಡಬೇಕಿತ್ತು. ಆದರೆ ಮನಸ್ಸಿನಲ್ಲಿ ಕೊತ್ವಾಲ್ ಬಂದು ಆ ವ್ಯಕ್ತಿಯನ್ನೇ ಬೆದರಿಸಿದ್ದರು. ಇಂಥವರು ನಾಳೆ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಕೊಡುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Sat, 18 March 23