ಗುಳಿಗ ದೈವಗೆ ಆರಗ ಜ್ಞಾನೇಂದ್ರರಿಂದ ಅವಹೇಳನ ಪ್ರಕರಣ: ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದಿಂದ ವಿಶೇಷ ಪ್ರಾರ್ಥನೆ

ಗಂಗಾಧರ​ ಬ. ಸಾಬೋಜಿ

|

Updated on:Mar 18, 2023 | 8:03 PM

ತುಳುನಾಡ ಆರಾಧ್ಯ ಗುಳಿಗ ದೈವಗೆ ಸಚಿವ ಆರಗ ಜ್ಞಾನೇಂದ್ರ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಖಂಡಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ಗುಳಿಗ ದೈವಗೆ ಆರಗ ಜ್ಞಾನೇಂದ್ರರಿಂದ ಅವಹೇಳನ ಪ್ರಕರಣ: ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದಿಂದ ವಿಶೇಷ ಪ್ರಾರ್ಥನೆ
ಸಚಿವ ಆರಗ ಜ್ಞಾನೇಂದ್ರ
Image Credit source: vijaykarnataka.com

ಮಂಗಳೂರು: ತುಳುನಾಡ ಆರಾಧ್ಯ ಗುಳಿಗ ದೈವಗೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಖಂಡಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಮಂಗಳೂರಿನ ಹೊರವಲಯದ ಪಚ್ಚನಾಡಿಯ ಬಂದಲೆ ಎಂಬಲ್ಲಿರುವ ಶ್ರೀಮಂತ ರಾಜ ಗುಳಿಗ ಕ್ಷೇತ್ರದಲ್ಲಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದಿಂದ ಪ್ರಾರ್ಥನೆ ಸಲ್ಲಿಸಲಾಗಿದೆ. ನಾಟಕ ಪ್ರದರ್ಶನದ ವೇಳೆ ತಪ್ಪಾಗಿದ್ದರೆ ಕ್ಷಮಿಸುವಂತೆ ಮತ್ತು ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸದ್ಬುದ್ಧಿ ನೀಡುವಂತೆ ಪ್ರಾರ್ಥನೆ ಸಲ್ಲಿಕೆ ಮಾಡಲಾಗಿದೆ. ಮುಂದಿನ ವರ್ಷ ಮತ್ತೊಮ್ಮೆ ಶಿವದೂತ ಗುಳಿಗ ನಾಟಕ ಪ್ರದರ್ಶನ ಆಯೋಜಿಸುವುದಾಗಿ ಸಂಕಲ್ಪ ಮಾಡಲಾಗಿದೆ. ಇನ್ನು 30ಕ್ಕೂ ಹೆಚ್ಚು ವಾಹನಗಳಲ್ಲಿ ಕಾಂಗ್ರೆಸ್ ಮುಖಂಡರು ಗುಳಿಗ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ರಂಗಸಿಂಗಾರ ತಂಡದಿಂದ ನಾಟಕ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಣಿಕ ಗುಳಿಗ ದೈವವನ್ನು ಜಾಪಾಳ್ ಮಾತ್ರೆಗೆ ಆರಗ ಜ್ಞಾನೇಂದ್ರ ಹೋಲಿಸಿದ್ದರು ಎನ್ನಲಾಗಿದೆ.

ಆರಗ ಜ್ಞಾನೇಂದ್ರ ವಿರುದ್ಧ ದೈವ ನರ್ತಕರು ಆಕ್ರೋಶ

ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ದೈವ ನರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಕರಾವಳಿಯ ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಗೃಹ ಸಚಿವರು ಫ್ಲೆಕ್ಸ್ ನೋಡಿ‌ ಗುಳಿಗೆ-ಗುಳಿಗೆ ಎಂದು ಹೇಳಿದ್ದಾರೆ. ನಮ್ಮ ದೈವವನ್ನು ಒಂದು ಮಾತ್ರೆಗೆ ಹೋಲಿಸಿದ್ದಾರೆ. ನಮ್ಮ ದೈವವೇ ಅವರಿಗೆ ಉತ್ತರ ಕೊಡಬೇಕು. ಎಲ್ಲಾ ಗುಳಿಗ ಶಕ್ತಿಗಳು ಒಟ್ಟು ಸೇರಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು. ದೈವ-ದೇವರ ಸನ್ನಿಧಿಯಲ್ಲಿ ಬಂದು ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಪ್ರಭಾಕರ ಶಾಂತಿಕೋಡಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಗುಳಿಗ ದೈವದ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ: ದೈವ ನರ್ತಕರ ಆಕ್ರೋಶ

ಒಂದು ವಾರ ಗಡುವು

ಒಂದು ವಾರ ಗಡುವು ನೀಡುತ್ತೇವೆ. ಅಷ್ಟರಲ್ಲಿ ಬರದೆ ಇದ್ದರೆ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಘೇರಾವ್ ಹಾಕುತ್ತೇವೆ. ಇನ್ಮುಂದೆ ದೈವಾರಾಧನೆಯನ್ನು ನಾಟಕ, ಯಕ್ಷಗಾನದಲ್ಲಿ ಬಳಕೆ ಮಾಡಬೇಡಿ. ದೈವರಾಧನೆಗೆ ಈ ರೀತಿ ನಡೆಯುವ ಅಪಚಾರ ತಪ್ಪಿಸಲು ದೈವರಾಧಕರ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಜೊತೆಗೆ ಆರಗ ಜ್ಞಾನೇಂದ್ರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಗುಳಿಗ ದೈವದ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?

ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಮಾರ್ಚ್​ 14 ರಂದು ತೀರ್ಥಹಳ್ಳಿಯಲ್ಲಿ ಪ್ರಸಿದ್ದ ಶಿವದೂತೆ ಗುಳಿಗೆ ನಾಟಕ ನಡೆದಿತ್ತು. ಈ ನಾಟಕದ ಬಗ್ಗೆ ಮರುದಿನ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಆರಗ ಜ್ಞಾನೇಂದ್ರ ಕಾಂಗ್ರೆಸ್ ಟೀಕಿಸುವ ಭರದಲ್ಲಿ ನಿನ್ನೆಯಿಂದ ಎಂತದೋ ಗುಳಿಗೆ – ಗುಳಿಗೆ ಅಂತ ಹಾಕಿದ್ದಾರೆ. ಬಹಳ ಅಪಾಯ ಇದು. ಯಾವ ಗುಳಿಗೆ ಇವರು ಕೊಡುತ್ತಾರೆ ಅಂತ ಗೊತ್ತಿಲ್ಲ. ಜಾಪಾಳ್ ಗುಳಿಗೆ ಕೊಟ್ಟರು ಕೊಡಬಹುದು ಎಂದು ಹೇಳುವ ಮೂಲಕ, ದೈವಕ್ಕೆ ಅವಹೇಳನ ಮಾಡಿದ್ದಾರೆ, ಎಂಬ ಆರೋಪ ವ್ಯಕ್ತವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada