ಮಂಗಳೂರು: ದೆಹಲಿ ಮೂಲದ ಮಹಿಳೆಯೊಬ್ಬರ (Delhi Women) ಮೃತದೇಹ ಚಾಕುವಿನಿಂದ ಇರಿದ ಸ್ಥಿತಿಯಲ್ಲಿ ಮಂಗಳೂರಿನ (Mangaluru) ಕೋಟೆಪುರದ ಮನೆಯೊಂದರಲ್ಲಿ ಗುರುವಾರ ಪತ್ತೆಯಾಗಿದೆ. ಕೊಲೆಯಾದ ಮಹಿಳೆ ಸುಮಾರು 35-40 ವರ್ಷ ವಯಸ್ಸಿನವಳಾಗಿದ್ದು, ಆಕೆಯ ಕುರಿತ ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ. ಆಕೆಯೊಂದಿಗಿದ್ದ ದೆಹಲಿಯ ನಯೀಮ್ (30) ಎಂಬ ಯುವಕ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ನಯೀಮ್ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸ್ ಮೂಲಗಳು ಶುಕ್ರವಾರ ತಿಳಿಸಿವೆ. ಕೋಟೆಪುರಕ್ಕೆ ಬಂದಿದ್ದ ಮಹಿಳೆ ಹಾಗೂ ನಯೀಮ್ ಸ್ಥಳೀಯ ಸಲೂನ್ ಮಾಲೀಕರ ಮೂಲಕ ಮನೆ ಬಾಡಿಗೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರೂ ಮಕ್ಕಳ ಬಟ್ಟೆಗಳ ಚಿಲ್ಲರೆ ಮಾರಾಟಗಾರರು ಎಂದು ಪರಿಚಯಿಸಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
ಪರಿಸರದಲ್ಲಿ ಇಬ್ಬರೂ ಕಾಣದಿದ್ದಾಗ ಮತ್ತು ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗದೇ ಇದ್ದುದರಿಂದ ಸ್ಥಳೀಯ ನಿವಾಸಿಯೊಬ್ಬರು ಒಳಗೆ ಹೋಗಿ ನೋಡಿದ್ದಾರೆ. ಆಗ ಶೌಚಾಲಯದಲ್ಲಿ ಮಹಿಳೆಯ ಶವ ಬಿದ್ದಿರುವುದು ಕಂಡು ಬಂದಿದೆ. ಕೃತ್ಯಕ್ಕೆ ಬಳಸಿದ ಚಾಕು ಕೂಡ ಸ್ಥಳದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: Mangaluru News: ಕಳ್ಳತನವಾಗಿದ್ದ 124 ಪೈಕಿ 39 ಮೊಬೈಲ್ಗಳು CEIR ಪೋರ್ಟಲ್ ಮೂಲಕ ಪತ್ತೆ, ಮಾಲೀಕರಿಗೆ ವಾಪಸ್
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಹಾಗೂ ಬೆರಳಚ್ಚು ತಜ್ಞರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಬಾಡಿಗೆಗೆ ಮನೆ ನೀಡುವಾಗ ಬಾಡಿಗೆದಾರರ ಗುರುತಿನ ಚೀಟಿಯನ್ನು ಮಾಲೀಕರು ಕೇಳಿರಲಿಲ್ಲ ಎಂದು ತಿಳಿದುಬಂದಿದೆ. ಮನೆಯಲ್ಲಿ ದೊರೆತ ಆಧಾರ್ ಕಾರ್ಡ್ ಆಧರಿಸಿ ನಾಪತ್ತೆಯಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ